ವಿಟ್ಲ, ಜು 13: ಕೇರಳ ರಾಜ್ಯದ ವಿವಿಧ ಕಡೆಗಳಲ್ಲಿಂದ ರಾಜಾರೋಷವಾಗಿ ಮಾಂಸದ ತ್ಯಾಜ್ಯವನ್ನು ತಂದು ಕರ್ನಾಟಕದ ವಿಟ್ಲ ಠಾಣಾ ವ್ಯಾಪ್ತಿ ಹಾಗೂ ಪುತ್ತೂರು ಠಾಣಾ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಎಸೆದು ಭೂಮಿಯನ್ನು ಮಲಿನಗೊಳಿಸುವ ಕಾರ್ಯ ಮಾಡುತ್ತಿದ್ದ ಕುಖ್ಯಾತ ತಂಡದ ಲಾರಿ ಹೂತು ಹೋದ ಪರಿಣಾಮ ನಾಗರೀಕರ ಕೈಗೆ ಸಿಕ್ಕಿಹಾಕಿಕೊಂಡು ಬಳಿಕ ಪೊಲೀಸರ ಅತಿಥಿಯಾದ ಘಟನೆ ಗುರುವಾರ ಇರ್ದೆ ಗ್ರಾಮದ ಬಾಳೆಗುಳಿಯಲ್ಲಿ ನಡೆದಿದೆ.
ಲಾರಿಯ ಹಾಗೂ ಕಾರಿನಲ್ಲಿ ಬಂದು ತ್ಯಾಜ್ಯವನ್ನು ವಿಲೇವಾರಿ ಮಾಡಿಹೋಗುತ್ತಿದ್ದರು. ಕಾರಿನಲ್ಲಿ ಸ್ಥಳೀಯ ನಿವಾಸಿಯೊಬ್ಬ ದಾರಿ ತೋರಿಸುವ ನಿಟ್ಟಿನಲ್ಲಿ ಏಜೆಂತ್ ತರ ಇರುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸ್ಥಳೀಯ ನಿವಾಸಿ ಒಬ್ಬ ಸೇರಿ ಕಾರಿನಲ್ಲಿ ಇಬ್ಬರು ಹಾಗೂ ಲಾರಿಯಲ್ಲಿ ಮೂರು ಜನರಿದ್ದರೆನ್ನಲಾಗಿದೆ. ಸ್ಥಳದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಸಂಪ್ಯ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
ಕರ್ನಾಟಕದಿಂದ ಮಾಂಸದ ಬ್ರಾಯ್ಲರ್ ಕೋಳಿಗಳನ್ನು ಕೇರಳಕ್ಕೆ ಸಾಗಿಸಿಕೊಂಡು ಅಲ್ಲಿಂದ ಕೋಳಿತ್ಯಾಜ್ಯಗಳನ್ನು ಕರ್ನಾಟಕ ಗಡಿ ಪ್ರದೇಶಗಳಲ್ಲಿ ಎಸೆದು ಹೋಗುವ ಬಗ್ಗೆ ಕಳೆದ ಹಲವಾರು ಸಮಯದಿಂದ ಸಾರ್ವಜನಿಕರು ಸ್ಥಳೀಯ ಪಂಚಾಯಿತಿ, ಪೊಲೀಸ್ ಠಾಣೆಗಳಲ್ಲಿ ದೂರು ನೀಡುತ್ತಾ ಬಂದಿದ್ದರು. ಆದರೆ ಸಾರ್ವಜನಿಕರ ದೂರಿಗೆ ಬೆಲೆ ಸಿಗದ ಹಿನ್ನಲೆಯಲ್ಲಿ ಬಾರಿ ಪ್ರಮಾಣದ ತ್ಯಾಜ್ಯವನ್ನು ತಂದು ಸುರಿಯುವ ಹಂತಕ್ಕೆ ಕೇರಳದ ಅಕ್ರಮ ದಂಧೆ ಕೋರರು ಮುಂದಾಗಿದ್ದಾರೆ.
ಕೋಳಿತ್ಯಾಜ್ಯದಿಂದ ಸುತ್ತಮುತ್ತಲಿನ ಕಿ.ಮೀ ವ್ಯಾಪ್ತಿಯ ಪರಿಸರ ದುರ್ನಾತದಿಂದ ತೊಂದರೆ ಅನುಭವಿಸುತ್ತಿದ್ದರು. ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದ್ದು, ಲೋಡುಗಟ್ಟಲೆ ಕೊಳೆತ ತ್ಯಾಜ್ಯವನ್ನು ಸಂಬಂಧಿತ ಗ್ರಾಮ ಪಂಚಾಯಿತಿ ಸಹಸ್ರಾರು ರೂ. ಖರ್ಚು ಮಾಡಿ ವಿಲೇವಾರಿ ಮಾಡುತ್ತಿತ್ತು. ಈ ಬಗ್ಗೆ ನಿರಂತರ ದೂರು ನೀಡಲಾಗುತ್ತಿತ್ತು. ಈಗಾಗಲೇ ವಿಟ್ಲ ಠಾಣಾ ವ್ಯಾಪ್ತಿಯ ಅಳಿಕೆ, ಕೇಪು, ಪುಣಚ, ಮಾಣಿಲ, ಪೆರುವಾಯಿ ಇನ್ನಿತರ ಪಂಚಾಯಿತಿಗಳಲ್ಲಿ ಹಾಗೂ ವಿಟ್ಲ ಪೊಲೀಸ್ ಠಾಣೆಯಲ್ಲಿಯೂ ಸಹ ಈ ಬಗ್ಗೆ ದೂರು ನೀಡಿ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಲಾಗಿತ್ತು.
ಮಳೆಯ ಕಾರಣದಿಂದ ಇರ್ದೆಯಲ್ಲಿ ಲಾರಿಯನ್ನು ಚಲಾಯಿಸಲಾಗದೆ ಒಂದು ಭಾಗದಲ್ಲಿ ಹೋತು ಹೋಗಿತ್ತು. ಇದೇ ಭಾಗದಲ್ಲಿ ಲಾರಿಯಲ್ಲಿದ್ದ ತ್ಯಾಜ್ಯವನ್ನು ಇಳಿಸುತ್ತಿದ್ದ ಸಮಯದಲ್ಲಿ ಸ್ಥಳೀಯರು ಗಮನಿಸಿ ಪ್ರಶ್ನಿಸಿದ್ದಾರೆ ಈ ಸಂದರ್ಭ ಸಂಪೂರ್ಣ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಜಮಾಯಿಸಿದ ಜನರು ಇಳಿಸಿದ್ದ ತ್ಯಾಜ್ಯವನ್ನು ಲಾರಿಯಲ್ಲಿದ್ದವರ ಕೈಯಲ್ಲೇ ಲಾರಿಗೆ ಮತ್ತೆ ಹಾಕಿಸಿ, ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಇಳಿಸ ಬಾರದು ಮತ್ತೆ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ವಿಲೇವಾರಿ ಮಾಡಬಾರದೆಂದು ಪಟ್ಟುಹಿಡಿದರು. ಇದರಿಂದ ರಾತ್ರಿ ಸಮಯಕ್ಕೆ ಪುತ್ತೂರು ಪುರಸಭೆಯ ಡಂಪ್ಪಿಂಗ್ ಯಾರ್ಡ್ಗೆ ಬಾರಿ ಮೊತ್ತವನ್ನು ಪಾವತಿಸುವ ಮೂಲಕ ಲಾರಿಯನ್ನು ಖಾಲಿಗೊಳಿಸಲಾಯಿತು.
ಎರಡು ದಿನದಿಂದ ಪೊಲೀಸ್ ತನಿಖೆ:
ವಿಟ್ಲದ ಬಿಲ್ಲಂಪದವು ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ ಹೋದ ವಿಚಾರ ತಿಳಿಯುತ್ತಿದ್ದಂತೆ ಅಳಿಕೆ ಪಂಚಾಯಿತಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಕೇಸು ದಾಖಲಿಸಿತ್ತು. ಇದರಿಂದ ಇಲಾಖೆಗೆ ಒತ್ತಡ ಹೆಚ್ಚಾಗಿ ರಾತ್ರಿ ಗಸ್ತು ಹೆಚ್ಚಿಸಿ ಗಡಿ ಭಾಗದಲ್ಲಿ ಪೊಲೀಸ್ ನಿಯೋಜಿಸಿ ಲಾರಿಗಳನ್ನು ತಪಾಸಣೆ ಮಾಡುತ್ತಿತ್ತು. ಇದರಿಂದ ಕೋಳಿ ಸಾಗಾಟದ ಲಾರಿಗಳೂ ಇತ್ತ ಕಡೆ ಬರುವುದು ಸ್ಥಗಿತವಾಗಿತ್ತು. ತ್ಯಾಜ್ಯ ತುಂಬಿದ ಲಾರಿಯೂ ಗುರುವಾರ ಅಡ್ಕಸ್ಥಳ ತನಕ ಬಂದು ತನಿಖೆ ನಡೆಯುವ ವಿಚಾರ ತಿಳಿದು, ಒಳ ರಸ್ತೆಯ ಮೂಲಕ ಇರ್ದೆಯನ್ನು ತಲುಪಿದೆ ಎನ್ನಲಾಗಿದೆ.
ಎರಡೂ ಠಾಣಾವ್ಯಾಪ್ತಿಯ ಪೊಲೀಸರಿಂದ ಕಾರ್ಯಾಚರಣೆ:
ಬುಧವಾರ ನಸುಕಿನ ವೇಳೆ ಇರ್ದೆ ಗ್ರಾಮ ವ್ಯಾಪ್ತಿಯಲ್ಲಿ ಹೂತು ಹೋದ ವಿಚಾರ ಅಕ್ಕಪಕ್ಕದ ಗ್ರಾಮದೆಲ್ಲೆಡೆ ಹಬ್ಬುತ್ತಿದ್ದಂತೆಯೇ ಆಕ್ರೋಶಿತರಾದ ಸಾರ್ವಜನಿಕರು ತಂಡದ ಮೇಲೆ ಏರಿ ಹೋಗಿದ್ದರು. ಕೆಲವರು ಕೋಪದಿಂದ ಥಳಿಸಿದ್ದರು. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ವಿಟ್ಲ ಪೊಲೀಸ್ ಠಾಣೆಗೆ ಸುದ್ದಿ ತಿಳಿಸಿದ ಕಾರಣ ಎರಡೂ ಕಡೆಗಳಿಂದ ಪೊಲೀಸ್ ತಂಡಗಳು ಸ್ಥಳಕ್ಕೆ ಬಂದಿದ್ದವು. ಬೆಳಗ್ಗೆ ಬಂದ ಪೊಲೀಸರು ಸಂಜೆ ತನಕ ಉಳಿದು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ತ್ಯಾಜ್ಯವನ್ನು ಲಾರಿಗೆ ಲೋಡ್ ಮಾಡಿಸಿದ್ದರು. ಈ ಮಧ್ಯೆ ಘಟನಾ ಸ್ಥಳಕ್ಕೆ ಪುಣಚ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ, ಪಿಡಿಒ ಭಾರತಿ ಶೆಟ್ಟಿ, ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಲೋಕೇಶ್ ಬಂದಿದ್ದರು.
ಬಾರಿ ಮೊತ್ತಕ್ಕೆ ಸಾಗಾಟ:
ಕೇರಳದ ಕೋಯಿಕ್ಕೋಡಿನಿಂದ ಸುಮಾರು 300 ಕಿ. ಮೀ. ಕ್ರಮಿಸಿ ಬಂದು ತ್ಯಾಜ್ಯವನ್ನು ಜಿಲ್ಲೆಯ ಭೂಪ್ರದೇಶದಲ್ಲಿ ಸುರಿಯುವುದಕ್ಕೆ ಒಂದು ಲೋಡ್ಗೆ ಸುಮಾರು 1.5 ಲಕ್ಷದಿಂದ 2 ಲಕ್ಷದವರೆಗಿನ ಬಾರಿ ಮೊತ್ತದ ಡೀಲಿಂಗ್ ನಡೆಯುತ್ತಿದೆ. ಕೇರಳದಲ್ಲಿ ಅನಧಿಕೃತ ಕಸಾಯಿಖಾನೆಯಿಂದ ತ್ಯಾಜ್ಯವನ್ನು ವಿಲೇವಾರಿ ಮಾಡಲು ಕಾನೂನು ಬಿಡುತ್ತಿಲ್ಲ. ಹಲವು ರೀತಿಯಲ್ಲಿ ದಂಡವನ್ನು ಹಾಕುವ ಮೂಲಕ ಯಾವ ಪ್ರದೇಶದಲ್ಲೂ ಕಸ ವಿಲೇವಾರಿ ಮಾಡಲಾಗುತ್ತಿಲ್ಲ. ಇದಕ್ಕಾಗಿ ಒಂದು ಚೀಲಕ್ಕೆ ಸುಮಾರು 400 ರೂ ನಂತೆ ನೀಡಿ ಒಂದು ಲಾರಿಯಲ್ಲಿ 500 ಚೀಲದ ವರೆಗೆ ತುಂಬಿಕೊಂಡು ಬಂದು ಎಸೆಯಲಾಗುತ್ತಿದೆ.