ಮಂಗಳೂರು, ಜು 12: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ ನಡೆಸಲಾಗುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಂಗಳೂರು ಮೇಯರ್ ಕೆ ಭಾಸ್ಕರ್ ಮೊಯ್ಲಿ ಮತ್ತು ಉಪಮೇಯರ್ ಮೊಹಮ್ಮದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಲಾಲ್ಭಾಗ್ನಲ್ಲಿರುವ ಪಾಲಿಕೆಯ ಈಜುಕೊಳಕ್ಕೆ ಭೇಟಿ ನೀಡಿದ ಅವರು ಇಲ್ಲಿ ಇನ್ನು ಮುಂದೆ ನೀರನ್ನು ಬದಲಾಯಿಸುವ ವಿನೂತನ ಮಾದರಿಯ ಓಝೋನೈಜೇಶನ್ ಸಿಸ್ಟಂ ಅಳವಡಿಸುವ ಕುರಿಂತೆ ಪಾಲಿಕೆ ಇಂಜಿನಿಯರ್ ಗಳಿಂದ ಮಾಹಿತಿ ಸಂಗ್ರಹಿಸಿದರು. ಈಜುಕೊಳದ ಗ್ಯಾಲರಿ ಸೇರಿದಂತೆ ಇಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ ಸುಮಾರು ೯೫ ಲಕ್ಷ ರೂಪಾಯಿ ವೆಚ್ಚದಲ್ಲಿ ಕೆಲಸಗಳು ನಡೆಯಲಿದ್ದು, ನೀರು ಬದಲಾಯಿಸುವ ವ್ಯವಸ್ಥೆಯ ಪ್ಲಾಂಟ್ಗೆ ಒಂದು ಕೋಟಿ ರೂಪಾಯಿ ವೆಚ್ಚ ತಗುಲಲಿದೆ ಎಂದು ಅಧಿಕಾರಿಗಳು ಹೇಳಿದರು.
ಇನ್ನು ಇದೇ ಸಂದರ್ಭ ಅವರು ಕದ್ರಿ ಪಾರ್ಕ್, ಬಜಾಲ್ ರೋಡ್ ಮತ್ತು ವೆಲೆನ್ಸಿಯಾದ ಬಳಿ ನಡೆಯುತ್ತಿರುವ ಕಾಮಗಾರಿಗಳನ್ನೂ ವೀಕ್ಷಣೆ ಮಾಡಿದರು. ಇಲ್ಲಿ ಚುನಾವಣೆಗೆ ಮುನ್ನ ಕೈಗೆತ್ತಿಕೊಂಡಿರುವ ಹಲವು ಅಭಿವೃದ್ಧಿ ಕಾಮಗಾರಿಗಳು ಹಾಗೂ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆಯೂ ಗುತ್ತಿಗೆದಾರರಿಗೆ ಸೂಚಿಸಿದರು. ಬಳಿಕ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮೇಯರ್ ಭಾಸ್ಕರ್ ಮೊಯ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.