ಉಡುಪಿ, ಜು 12: ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿ ರೈತರು ಮಾಡಿರುವ ಎಲ್ಲಾ ಸಾಲವನ್ನು ಮನ್ನಾ ಮಾಡಿ ರೈತರನ್ನು ಒಂದು ಬಾರಿ ಸಾಲದಿಂದ ಮುಕ್ತರನ್ನಾಗಿ ಮಾಡುವ ಭರವಸೆ ನೀಡಿದೆ. ಬಜೆಟ್ಗೂ ಮುನ್ನಾ ರೈತ ಮುಖಂಡರೊಂದಿಗೆ ಸಭೆಯಲ್ಲಿ ತಿಳಿಸಿರುವಂತೆ ರೈತರ ಸಂಪೂರ್ಣ ಸಾಲ ಮನ್ನಾದ ಭರವಸೆ ನೀಡಿದೆ. ಆದರೆ, ಈಗ ಮಾತನ್ನು ಬದಲಿಸಿ ರೈತರ ಸುಸ್ತಿ ಸಾಲ ಮಾತ್ರ ಮನ್ನಾ ಎಂದು ಹಲವು ಷರತ್ತುಗಳನ್ನು ಹಾಕಿರುವುದು ಅಪಹಾಸ್ಯಕರ. ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ಕಾಳಜಿ ಏನು ಎಂಬುದು ಅನುಮಾನಸ್ಪದಕ್ಕೆ ಎಡೆಮಾಡಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ರೈತಾ ಮೋರ್ಚಾ ತಿಳಿಸಿದೆ.
ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ರೈತರು ಸಹಕಾರ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಲ್ಪಾವಧಿ ಸಾಲ ಹಾಗೂ ದೀರ್ಘಾವಧಿ ಸಾಲಗಳನ್ನು ಸರಿಯಾದ ಸಮಯಕ್ಕೆ ಹೆಚ್ಚಿನ ರೈತರು ಮರುಪಾವತಿ ಮಾಡುತ್ತಿದ್ದು, 2018ರ ಮಾರ್ಚ್ 31 ರವರೆಗೆ ಮರುಪಾವತಿ ಮಾಡಿರುವ ಎಲ್ಲಾ ರೈತರಿಗೂ ಸಾಲ ಮನ್ನಾದ ಪ್ರಯೋಜನ ದೊರಕಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಆಗ್ರಹಿಸಿದೆ. ಜಿಲ್ಲೆಯ ರೈತರ ಸಮಸ್ಯೆಗಳಾದ ಬಿತ್ತನೆ ಬೀಜದ ಕೊರತೆ, ನೆರೆ ಹಾವಳಿಯಿಂದ ಬೆಳೆ ಹಾನಿಯಾದ ರೈತರಿಗೆ ನೆರವುಗಳನ್ನು ತುರ್ತಾಗಿ ನೀಡಬೇಕು. ಸರ್ಕಾರ ಸ್ಪಂಧಿಸದೇ ಇದ್ದಲ್ಲಿ, ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ ಮಾಡುವುದಾಗಿ ಅಪರ ಜಿಲ್ಲಾಧಿಕಾರಿ ಅನುರಾಧ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಸತೀಶ್ ಶೆಟ್ಟಿ ಮುಟ್ಲುಪಾಡಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಉಪ್ಪೂರು, ಶ್ರೀನಿವಾಸ ಶರ್ಮಾ ಮತ್ತಿತರರು ಉಪಸ್ಥಿತರಿದ್ದರು.