ಕಾಸರಗೋಡು, ಜು 12: ಪೆರ್ಲ ಉಕ್ಕಿನಡ್ಕದಲ್ಲಿ ಕಾಸರಗೋಡು ವೈದ್ಯಕೀಯ ಕಾಲೇಜು ಕಾಮಗಾರಿಗೆ ಕೊನೆಗೂ ಹಸಿರು ನಿಶಾನೆ ಲಭಿಸಿದೆ. ಕಾಲೇಜು ಆಸ್ಪತ್ರೆ ವಿಳಂಬದ ಬಗ್ಗೆ ಆಕ್ರೋಶ ಕೇಳಿಬಂದಿತ್ತು. ಹಲವಾರು ಪ್ರತಿಭಟನೆಗೆ ವೇದಿಕೆಯಾಗಿತ್ತು. ಅಕಾಡಮಿಕ್ ಬ್ಲಾಕ್ ಕಟ್ಟಡ ಕಾಮಗಾರಿ ಆರಂಭಿಸಿದ್ದರೂ ಇನ್ನೂ ಪೂರ್ಣಗೊಂಡಿಲ್ಲ.ಆಸ್ಪತ್ರೆ ಕಟ್ಟಡ ಕಾಮಗಾರಿ ಆರಂಭಿಸಬೇಕಿದ್ದರೂ ಅಕಾಡಮಿಕ್ ಕಟ್ಟಡ ಕಾಮಗಾರಿ ಮೊದಲು ಆರಂಭಿಸಿದ ಬಗ್ಗೆ ಪ್ರತಿಭಟನೆ ವ್ಯಕ್ತವಾಗಿತ್ತು .ಈ ನಡುವೆ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರಕಾರ ೮೫ ಕೋಟಿ ರೂ . ಮೀಸಲಿರಿಸಿದ್ದು, ಅಂತಿಮ ಅನುಮತಿ ಲಭಿಸಿದೆ.
ಎರಡು ವಾರದೊಳಗೆ ಕಾಮಗಾರಿ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 2013 ರ ನವಂಬರ್ 30 ರಂದು ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಆದರೆ ಕಳೆದ ಐದು ವರ್ಷಗಳಿಂದ ಕಾಮಗಾರಿ ನಿಧಾನಗತಿಯಲ್ಲೇ ಸಾಗಿದೆ. ಜನಪರ ಹೋರಾಟ ಹಿನ್ನಲೆಯಲ್ಲಿ ಅಕಾಡಮಿಕ್ ಬ್ಲಾಕ್ ಕಟ್ಟಡ ಕಾಮಗಾರಿ ಮಾತ್ರ ಇದುವರೆಗೆ ಆರಂಭಗೊಂಡಿದೆ. 2016 ರಲ್ಲಿ ಅಕಾಡಮಿಕ್ ಬ್ಲಾಕ್ ಕಟ್ಟಡ ಕಾಮಗಾರಿ ಆರಂಭಿಸಲಾಗಿತ್ತು . ಇದಕ್ಕಾಗಿ 26 ಕೋಟಿ ರೂ . ಮೀಸಲಿರಿಸಲಾಗಿತ್ತು.
2017 ರಲ್ಲಿ ವೈದ್ಯಕೀಯ ತರಗತಿ ಆರಂಭಿಸುವ ಭರವಸೆ ನೀಡಲಾಗಿತ್ತಾದರೂ ವರ್ಷ ಐದು ಕಳೆದರೂ ಇನ್ನೂ ನಿಧಾನಗತಿಯಲ್ಲೇ ಸಾಗುತ್ತಿದ್ದು, ಇದೀಗ ಆಸ್ಪತ್ರೆ ಸಮುಚ್ಛಯಕ್ಕೆ ಅನುದಾನ ಮಂಜೂರಾಗಿರುವುದರಿಂದ ಒಂದೆರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯನ್ನು ಹೊಂದಲಾಗಿದೆ.