ಪುತ್ತೂರು, ಜು12: ರಾತ್ರೋರಾತ್ರಿ ಲಾರಿಗಳಲ್ಲಿ ಕೋಳಿ ಮಾಂಸ ತ್ಯಾಜ್ಯ ತುಂಬಿದ ಗೋಣಿ ಚೀಲಗಳನ್ನು ತಲೆಂಜಿ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಎಸೆದು ಹೋಗಿದ್ದು, ಮಾಲಿನ್ಯ ಮತ್ತು ಆರೋಗ್ಯ ಸಮಸ್ಯೆ ಸಾಧ್ಯತೆಯ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಪುತ್ತೂರಿನಿಂದ ಕೌಡಿಚ್ಚಾರ್ ಮಾರ್ಗವಾಗಿ ಸುಳ್ಯಪದವು ಸಂಪರ್ಕಿಸುವಾಗ ಸಿಗುವ ಬಡಗನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತಲೆಂಜಿ ಎಂಬಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದೆರಡು ದಿನಗಳಿಂದ ಕಚ್ಛಾ ರಸ್ತೆಯ ಬದಿಯಲ್ಲೇ ರಾತ್ರಿ ಮರೆಯಲ್ಲಿ ದುಷ್ಕರ್ಮಿಗಳು ಮೂಟೆಗಟ್ಟಲೆ ಕೋಳಿ ತ್ಯಾಜ್ಯ ಎಸೆದು ಅಟ್ಟಹಾಸ ಮೆರೆದಿದ್ದಾರೆ.
ಲಾರಿಗಳಲ್ಲಿ ತ್ಯಾಜ್ಯವನ್ನು ತುಂಬಿಕೊಂಡು ಬಂದು ನಿರ್ಜನ ಪ್ರದೇಶದಲ್ಲಿ ಎಸೆಯುತ್ತಿರುವ ದುಷ್ಕರ್ಮಿಗಳು ಯಾರು ಅನ್ನುವುದರ ಕುರಿತು ಗ್ರಾಮಸ್ಥರಿಗೆ ಮಾಹಿತಿ ಇಲ್ಲ. ಸಾರ್ವಜನಿಕ ರಸ್ತೆಯ ಬದಿಯಲ್ಲಿ ರಾತ್ರಿ ಸಮಯ ತ್ಯಾಜ್ಯ ತುಂಬಿದ ಗೋಣಿ ಚೀಲವನ್ನು ಎಸೆದು ಹೋಗಲಾಗಿದೆ. ಈ ವ್ಯಾಪ್ತಿಯಲ್ಲಿ ಸುಮಾರು 75ಕ್ಕೂ ಮಿಕ್ಕಿ ಕುಟುಂಬಗಳು ವಾಸಿಸುತ್ತಿದ್ದು, ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ರಸ್ತೆಯ ಬದಿಯಲ್ಲಿರುವ ಕೋಳಿ ತ್ಯಾಜ್ಯ ದುರ್ವಾಸನೆ ಬೀರುತ್ತಿದ್ದು, ನೊಣಗಳು ಹಾಗೂ ಸೊಳ್ಳೆಗಳಿಂದ ಜನತೆಗೆ ರೋಗದ ಭೀತಿ ಎದುರಾಗಿದೆ.
ಇದೀಗ ಈ ಕುರಿತು ಸ್ಥಳೀಯರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ದೂರು ನೀಡಿದ್ದು, ಸಂಬಂಧಪಟ್ಟವರು ಯಾವುದೇ ಸ್ಪಂದನೆ ನೀಡಿಲ್ಲ. ಗ್ರಾಮಸ್ಥರಲ್ಲಿ, ಇದು ಆರೋಗ್ಯ ಇಲಾಖೆಗೆ ಸಂಬಂಧಿಸಿದ ವಿಷಯ ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ.