ಕುಂದಾಪುರ, ಜು 12: ಅಕ್ರಮ ಜಾನುವಾರು ಸಾಗಾಟದ ವಾಹನವನ್ನು ಅಡ್ಡಗಟ್ಟಿದ ಕೋಟ ಪೊಲೀಸರು ವಾಹನ ಸಹಿತ ಹತ್ತು ಜಾನುವಾರುಗಳ ಸಹಿತ ವಾಹನವನ್ನು ವಶಕ್ಕೆ ತೆಗೆದುಕೊಂಡ ಘಟನೆ ಹೊಂಬಾಡಿ ಮಂಡಾಡಿ ಗ್ರಾಮದ ಬಿದ್ಕಲ್ಕಟ್ಟೆ ರಸ್ತೆಯಲ್ಲಿ ನಡೆದಿದೆ.
ಕೋಟ ಪೊಲೀಸರು ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬಿಳಿ ಬಣ್ಣದ ಪಿಕ್ ಅಪ್ ವಾಹನವೊಂದು ಬಂದಿದ್ದು, ಪೊಲೀಸರನ್ನು ನೋಡಿದ ವಾಹನ ಚಾಲಕ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದು ವಾಹನದಲ್ಲಿದ್ದ ಮತ್ತೊಬ್ಬ ವ್ಯಕ್ತಿಯೂ ಪರಾರಿಯಾಗಿದ್ದಾನೆ. ಸಾರ್ವಜನಿಕರಿಗೆ ಅನುಮಾನ ಬಾರದಂತೆ ಮೀನು ಸಾಗಾಟದ ವಾಹನವನ್ನು ಕೃತ್ಯಕ್ಕೆ ಬಳಸಲಾಗಿತ್ತು, ಹಾಗೂ ಜಾನುವಾರುಗಳ ಕಾಲು ಕಟ್ಟಿ ಮೀನಿನ ಲೋಡ್ ಗೆ ಬಳಸುವಂತೆ ಮುಚ್ಚಲಾಗಿತ್ತು.
ವಾಹನದಲ್ಲಿ ಜಾನುವಾರು ಹಾಗೂ ಎಮ್ಮೆಗಳನ್ನು ನೈಲಾನ್ ಹಗ್ಗದಿಂದ ಹಿಂದಿನ ಕಾಲುಗಳಿಗೆ ಹಾಗು ಕುತ್ತಿಗೆಗೆ ಒಂದಕ್ಕೊಂದು ಹಿಂಸೆಯಾಗುವ ರೀತಿಯಲ್ಲಿ ಕಟ್ಟಿ ತುಂಬಿಸಲಾಗಿತ್ತು ಎನ್ನಲಾಗಿದ್ದು, ನಾಲ್ಕು ಕರುಗಳು, ಮೂರು ದನಗಳು, ಎರಡು ಎಮ್ಮೆಗಳಿದ್ದವು. ಆದರೆ ಅದರಲ್ಲಿ ಒಂದು ದನ ಹಾಗೂ ಒಂದು ಎಮ್ಮೆ ಸತ್ತಿದೆಯೆಂದು ತಿಳಿದುಬಂದಿದೆ.
ವಾಹನದಲ್ಲಿ ತುಂಬಿಸಲಾಗಿದ್ದ ಜಾನುವಾರುಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ 23,000 ಹಾಗು ಎರಡು ಎಮ್ಮೆಗಳ ಅಂದಾಜು ಮೌಲ್ಯ ರೂಪಾಯಿ 12,000 ಎಂದು ಅಂದಾಜಿಸಲಾಗಿದ್ದುಮ ಬೊಲೆರೋ ಪಿಕ್ಆಪ್ದ ಅಂದಾಜು ಮೌಲ್ಯ ಸುಮಾರು 5,00,000ರೂಪಾಯಿ ಎಂದು ಅಂದಾಜಿಸಲಾಗಿದೆ. ಹೊನ್ನಾವರ ಮೂಲದ ಮೊಹಮ್ಮದ್ ಝಬ್ರೂದ್ ಎಂಬುವರಿಗೆ ಸೇರಿದ್ದೆನ್ನಲಾದ ಪಿಕ್ಆಫ್ ವಾಹನದಲ್ಲಿ ಗೋಳಿಯಂಗಡಿಯ ಹುಸೇನ್ ಹಾಗೂ ಇತರರು ಸೇರಿ ಜಾನುವಾರು ಸಾಗಾಟ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.