ಬಂಟ್ವಾಳ, ಜು 11: ಇಲ್ಲಿನ ಕೆಳಗಿನ ಪೇಟೆಯಲ್ಲಿ ಪಕ್ಷವೊಂದರ ಮುಖಂಡರ ಮನೆಯೊಂದರಲ್ಲಿ ಸರಕಾರದ ಅನುಮತಿ ಇಲ್ಲದೆ ಆಧಾರ್ ಚೀಟಿಗಳ ನೋಂದಣಿ ಕಾರ್ಯ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರ ಸಹಾಯದೊಂದಿಗೆ ದಾಳಿ ನಡೆಸಿದ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಅಧಿಕಾರಿಗಳ ತಂಡ ಆಧಾರ್ ನೋಂದಣಿಗೆ ಉಪಯೋಗವಾಗುವ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ಕೆಳಗಿನಪೇಟೆಯ ಬಳಿಯ ಮನೆಗೆ ದಾಳಿ ನಡೆಸಿದ ಸಂದರ್ಭ, ಅಲ್ಲಿ ಆಧಾರ್ ನೋಂದಣಿ ಕೇಂದ್ರವೇ ಕಾರ್ಯಾಚರಿಸುತ್ತಿದ್ದುದು ಕಂಡುಬಂದಿದೆ. ೧ ಲ್ಯಾಪ್ಟಾಪ್, ೧ ಪ್ರಿಂಟರ್, ೧ ಸ್ಕ್ಯಾನರ್, ೧ ಐಸ್ಕ್ಯಾನ್, ೧ ಬಯೋಮೆಟ್ರಿಕ್ ಸಿಸ್ಟಮ್, ೧ ಡಿಜಿಟಲ್ ಕ್ಯಾಮರಾ, ೧ ಜಿಪಿಎಸ್ ವ್ಯವಸ್ಥೆ ಅಲ್ಲಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ ೧೧ರ ಬುಧವಾರದಂದು ೧೯ ಹಾಗೂ ಜುಲೈ ೧೦ರ ಮಂಗಳವಾರ ೭೫ ನೋಂದಾವಣಿಯಾಗಿರುವುದು ತಪಾಸಣೆಯ ವೇಳೆ ಬೆಳಕಿಗೆ ಬಂದಿದೆ. ಕಡಬ ಪಂಚಾಯತ್ ವ್ಯಾಪ್ತಿಯಲ್ಲಿ ಆಧಾರ್ ನೋಂದಾಣಿ ಮಾಡಲು ಅನುಮತಿ ಇರುವುದಾಗಿ ವ್ಯಕ್ತಿ ತಿಳಿಸಿದ್ದರೂ ತಪಾಸಣೆಯ ವೇಳೆ ಈ ಸಂಬಂಧ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ. ಈ ಸಂಬಂಧ ವ್ಯಕ್ತಿಯ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ತಹಶೀಲ್ದಾರ್ ತಿಳಿಸಿದ್ದಾರೆ. ದಾಳಿ ನಡೆಸಿದ ತಂಡದಲ್ಲಿ ಬಂಟ್ವಾಳ ನಗರ ಠಾಣಾಧಿಕಾರಿ ಚಂದ್ರಶೇಖರ್, ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ತಾಲೂಕು ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ, ತಾಲೂಕು ಕಚೇರಿ ಸಿಬ್ಬಂದಿ ವಿಷುಕುಮಾರ್, ಗ್ರಾಮ ಲೆಕ್ಕಾಧಿಕಾರಿ ರಾಜು ಲಮಾಣಿ ಭಾಗವಹಿಸಿದ್ದರು.