ಕಾಸರಗೋಡು, ಜು 11 : ಕಿಟಿಕಿ ಮುರಿದು ಒಳನುಗ್ಗಿದ ಕಳ್ಳನೋರ್ವ ಮನೆಯವರ ಮುಖಕ್ಕೆ ಮೆಣಸಿನ ಹುಡಿ ಎರಚಿ ಹತ್ತು ಪವನ್ ಚಿನ್ನಾಭರಣ ದರೋಡೆ ಮಾಡಿದ ಘಟನೆ ಬುಧವಾರ ಮುಂಜಾನೆ ಬದಿಯಡ್ಕ ಠಾಣಾ ವ್ಯಾಪ್ತಿಯ ನೆಲ್ಲಿಕಟ್ಟೆ ಚೂರಿತ್ತಡ್ಕದಲ್ಲಿ ನಡೆದಿದೆ. ಚೂರಿಪಳ್ಳದ ದಿವಂಗತ ಬೀರಾನ್ ಹಾಜಿ ಎಂಬವರ ಮನೆಯಲ್ಲಿ ಮುಂಜಾನೆ 3.30 ರ ಸುಮಾರಿಗೆ ದರೋಡೆ ನಡೆದಿದೆ. ಅಡುಗೆ ಕೋಣೆಯ ಮನೆಯ ಕಿಟಿಕಿ ಮುರಿದು ಒಳನುಗ್ಗಿದ ಓರ್ವ ಮಲಗಿದ್ದ ಬೀರನ್ ಹಾಜಿಯವರ ಪತ್ನಿ ಆಮಿನಾ ಮತ್ತು ಸೊಸೆ ಮರಿಯಾಂಬಿ ಮುಖಕ್ಕೆ ಮೆಣಸಿನ ಹುಡಿ ಎರಚಿದ್ದು , ಬೊಬ್ಬೆ ಹಾಕಿದಾಗ ಎಚ್ಚೆತ್ತ ಮಕ್ಕಳ ನ್ನು ಚಾಕು ತೋರಿಸಿ ಬೆದರಿಸಿದ್ದು ಇದರಿಂದ ಹೆದರಿದ ಇವರು ತಮ್ಮ ದೇಹದಲ್ಲಿದ್ದ ಚಿನ್ನಾಭರಣವನ್ನು ಕಳಚಿ ನೀಡಿದ್ದು, ಬಳಿಕ ದರೋಡೆಕೋರ ಅಲ್ಲಿಂದ ಪರಾರಿಯಾದನೆನ್ನಲಾಗಿದೆ. ಬೊಬ್ಬೆ ಹಾಕಿದರೂ ಆ ಸಮಯದಲ್ಲಿ ಮಳೆ ಸುರಿಯುತ್ತಿದ್ದುದರಿಂದ ಯಾರಿಗೂ ಕೇಳಲಿಲ್ಲ. ದರೋಡೆ ಕೋರ ಪರಾರಿಯಾದ ಬಳಿಕ ಪರಿಸರವಾಸಿಗಳಿಗೆ ಮಾಹಿತಿ ನೀಡಿದ್ದು , ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ಗಾಯಗೊಂಡ ಆಮಿನಾ ( 45 ಮತ್ತು ಮರಿಯಾಂಬಿ (24) ಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮರಿಯಾಂಬಿಯವರ ಪತಿ ಗಲ್ಫ್ ಉದ್ಯೋಗಿಯಾಗಿದ್ದಾರೆ. ಮನೆಯಲಿ ಆಮಿನಾ , ಮರಿಯಾಂಬಿ ಹಾಗೂ ಐದು ಮತ್ತು ಎರಡು ವರ್ಷದ ಮಕ್ಕಳು ಸೇರಿದಂತೆ ನಾಲ್ವರು ಮಾತ್ರ ಇದ್ದು , ಮನೆಯವರ ಚಲನ ವಲನ ಅರಿತವರೇ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಸುದ್ದಿ ತಿಳಿದು ಬದಿಯಡ್ಕ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿದ್ದು,ನಿಖೆ ನಡೆಸುತ್ತಿದ್ದಾರೆ .ಮನೆಯೊಳಗೆ ಓರ್ವ ಮಾತ್ರ ಬಂದಿದ್ದನು ಎಂದು ಗಾಯಾಳು ಗಳು ತಿಳಿಸಿದ್ದಾರೆ . ಒಬ್ಬನಿಂದ ಇಂತಹ ಕೃತ್ಯ ನಡೆಸಲು ಸಾಧ್ಯ ಇಲ್ಲ ಹೊರಗಡೆ ಈತನ ಸಹಾಯಕ್ಕೆ ಯಾರದರೂ ಇದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ .
ಮನೆ ಯಜಮಾನ ಬೀರಾನ್ ಹಾಜಿ ಎರಡು ವರ್ಷಗಳ ಹಿಂದೆ ನಿಧನ ರಾಗಿದ್ದು , ಪುತ್ರ ಮುಹಮ್ಮದ್ ಆಸಿಫ್ ಗಲ್ಫ್ ನಲ್ಲಿ ಉದ್ಯೋಗದಲ್ಲಿದ್ದಾರೆ . ಪೂರ್ವ ಯೋಜಿತವಾಗಿ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ .ಮುಸಕು ಧಾರಿಯಾಗಿ ಆಗಮಿಸಿದ್ದ ಈತ ಕೈಗೆ ಗ್ಲೌ ಸ್ ಹಾಗೂ ಜಾಕೆಟ್ ಧರಿಸಿದ್ದನು ಎಂದು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿರುವ ಬೆರಳಚ್ಚು ತಜ್ಞರು ಮಾಹಿತಿ ಕಲೆ ಹಾಕಿದ್ದಾರೆ .