ಮಂಗಳೂರು, ಜು 11: ಅಶ್ಲೀಲತೆ ಬಿಂಬಿಸುವ , ಅನೈತಿಕ ಸಂಬಂಧ ಸರಿ ಎನ್ನುವ ಕಥೆಯೊಂದು ಮಂಗಳೂರು ವಿಶ್ವ ವಿದ್ಯಾನಿಲಯದ ಬಿ. ಕಾಂ ಪಠ್ಯದಲ್ಲಿ ನೀಡಲಾಗಿದ್ದು, ಇದು ವಿವಾದವಾಗಿ ಪರಿಣಮಿಸಿದೆ. ಅತ್ತ ಕಡೆ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ವಿ.ವಿ ಪಠ್ಯವನ್ನು ಹಿಂತೆಗೆದುಕೊಂಡಿದೆ.
ಮಟ್ಟಾರ ವಿಠಲ ಹೆಗ್ಡೆ ಅವರು ಬರೆದಿರುವ " ಮಗುವಿನ ತಂದೆ" ಎಂಬ ಹೆಸರಿನ ಕಥೆಯನ್ನು ಬಿ. ಕಾಂ ನ ಮೂರನೇ ಸೆಮಿಸ್ಟರ್ ನ ನುಡಿ ನೂಪುರ ಕನ್ನಡ ಪಠ್ಯದಲ್ಲಿ ಅಳವಡಿಸಲಾಗಿದ್ದು, ಅನೈತಿಕ ಸಂಬಂಧ ಸರಿ ಎಂದು ಬಿಂಬಿಸುವ ಸಾಲುಗಳಿವೆ ಎಂಬ ಆರೋಪ ಕೇಳಿ ಬಂದಿತ್ತು . ಇದು ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಪಠ್ಯವನ್ನು ಕೂಡಲೇ ಹಿಂಪಡೆಯಬೇಕು ಎನ್ನುವ ಆಗ್ರಹವೂ ತೀವ್ರವಾಗಿ ಕೇಳಿ ಬಂದಿತ್ತು. ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಎಬಿವಿಪಿ ರಾಜ್ಯ ಉಪಾಧ್ಯಕ್ಷ , ಕೇಶವ ಬಂಗೇರಾ , 1940 ರ ಸಂದರ್ಭದಲ್ಲಿ ಅಂತರಂಗದ ಕಥೆ ಎಂಬ ಪುಸ್ತಕದಲ್ಲಿ ಈ ಕಥೆ ಪ್ರಕಟಗೊಂಡಿತ್ತು. ಸುಮಾರು 78 ವರ್ಷಗಳ ನಂತರ ಅದನ್ನು ಪಠ್ಯದಲ್ಲಿ ಅಳವಡಿಸಲಾಗಿದೆ , ಇದನ್ನು ಈಗಿನ ಕಾಲದಲ್ಲಿ ಪಠ್ಯದಲ್ಲಿ ಅಳವಡಿಸಿಕೊಳ್ಳುವ ಉದ್ದೇಶ ಎನು ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಕಥೆಯ ಆಶಯದಲ್ಲಿ ಬದಲಾಗುತ್ತಿರುವ ಸನ್ನಿವೇಶದಲ್ಲಿ ವಿವಾಹೇತರ ಸಂಬಂಧಗಳು ಮತ್ತೆ ಜಿಜ್ಞಾಸೆಗೆ ಒಳಪಡಬೇಕು ಎಂದಿದೆ. ಈ ರೀತಿಯ ಮೌಲ್ಯಗಳನ್ನು ಪದವಿ ಹೇಳಿಕೊಡುವ ಉದ್ದೇಶದ ಹಿಂದೆ ಏನಿದೆ ? ಎಂದು ಪಠ್ಯವನ್ನು ವಿರೋಧಿಸಿದ್ದಾರೆ.
ಅತ್ತ ಕಡೆ ಈ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದಂತೆ ತಡವಾಗಿ ಎಚ್ಚೆತ್ತುಕೊಂಡ ಮಂಗಳೂರು ವಿಶ್ವ ವಿದ್ಯಾಲಯ ಪಠ್ಯ ವಾಪಾಸ್ ಪಡೆದಿದೆ. ಈ ಬಗ್ಗೆ ಕುಲಸಚಿವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ವಿವಾದಿತ ಪಠ್ಯ ವಾಪಾಸು ಪಡೆಯಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.