ಬೆಂಗಳೂರು, ಜು 10: ರಾಜ್ಯದಲ್ಲಿ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ಎಲ್ಲಾ ಜಲಾಶಯಗಳು ಬಹುತೇಕ ತುಂಬುತ್ತಿರುವ ಹಿನ್ನಲೆಯಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಮಳೆಯಿಂದಾಗಿ ಎಷ್ಟು ನೀರು ಭರ್ತಿಯಾಗಿದೆಯೋ ಅಷ್ಟನ್ನು ಬಿಟ್ಟುಬಿಡಿ. ಒಟ್ಟಿನಲ್ಲಿ ಜುಲೈ ತಿಂಗಳಿನಲ್ಲಿ ತಮಿಳುನಾಡಿಗೆ ಎಷ್ಟು ನೀರು ಬಿಡಬೇಕೋ ಅಷ್ಟು ನೀರನ್ನು ಬಿಡಿ ಎಂದು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕರ್ನಾಟಕದಲ್ಲಿ ಹಲವೆಡೆ ಉತ್ತಮವಾಗಿ ಮಳೆಯಾಗುತ್ತಿದ್ದು, ಬೆಂಗಳೂರು, ರಾಮನಗರ ಹಾಗೂ ಮಂಡ್ಯದಿಂದ ಸಾಕಷ್ಟು ನೀರು ತಮಿಳುನಾಡಿಗೆ ಹರಿದುಹೋಗುತ್ತದೆ. ಇದರ ಜೊತೆಯಲ್ಲಿ ಜುಲೈ ತಿಂಗಳಲ್ಲಿ ತಮಿಳುನಾಡಿಗೆ ಎಷ್ಟು ನೀರು ಹರಿಯಬಿಡಬೇಕೋ ಅಷ್ಟು ನೀರನ್ನು ಬಿಡಿ ಎಂದು ಸಿಎಂ ಕುಮಾರ ಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಅನ್ವಯ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾದ ಬಳಿಕ ನಡೆದ ಸಭೆಯಲ್ಲಿ ತಮಿಳುನಾಡಿನ ಪ್ರತಿನಿಧಿ ತಿಂಗಳುವಾರು ಹಂಚಿಕೆ ಪೈಕಿ ಜುಲೈ ನಲ್ಲಿ 34 ಟಿಎಂಸಿ ನೀರನ್ನು ಕರ್ನಾಟಕ ಹರಿಸಬೇಕು, ಈ ನೀರನ್ನು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಲು ಮನವಿ ಮಾಡಿದ್ದರು. ಆದರೆ ತಮಿಳುನಾಡು ಪ್ರಸ್ತಾಪವನ್ನು ರಾಜ್ಯದ ಪ್ರತಿನಿಧಿ ರಾಕೇಶ್ ಸಿಂಗ್ ತಿರಸ್ಕರಿಸಿದ್ದರು.