ಬೆಂಗಳೂರು, ಜು 10 : ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ರೈತರ ಸಂಪೂರ್ಣ ಸಾಲ ಮಾಡಿ ಎಂದು ಒತ್ತಾಯಿಸಿ ರೈತರು ಬೀದಿಗಿಳಿದಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ಹಾದಿ ತುಳಿದಿದ್ದು , ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಚುನಾವಣಾ ಪೂರ್ವದಲ್ಲಿ ಜೆಡಿಎಸ್ ಅಧ್ಯಕ್ಷರಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ ಮಾತು ತಪ್ಪಿದ್ದಾರೆ. ರೂ.53 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಹೇಳಿದ ಅವರು ಕೇವಲ ರೂ.34 ಸಾವಿರ ಕೋಟಿಯಷ್ಟು ಸುಸ್ತಿ ಸಾಲ ಮನ್ನಾ ಮಾಡಿದ ಅವರು ಅಧಿಕಾರಕ್ಕೆ ಬಂದ ನಂತರ ಮಾತು ತಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಳಕ ರೈತರನ್ನು ಭೇಟಿ ಮಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ,ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರೊಂದಿಗೆ ಮಾತುಕತೆ ನಡೆಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಸಮಾಧಾನ ವ್ಯಕ್ತಪಡಿಸಿದ ಬಳಿಕ ಸಾಲ ಮನ್ನಾ ಕುರಿತು ಕೆಲವೇ ದಿನಗಳಲ್ಲಿ ಮಾರ್ಗಸೂಚಿ ಬರಲಿದ್ದು, ಅದರ ಪ್ರಕಾರ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂಬ ಭರವಸೆಯನ್ನು ನೀಡಿದರು. ಈ ಹಿನ್ನಲೆಯಲ್ಲಿ ರೈತರು ತಮ್ಮ ಪ್ರತಿಭಟನೆಗಳನ್ನು ಹಿಂದಕ್ಕೆ ಪಡೆದರು.