ಉಡುಪಿ, ಜು 10 : ಭೂಗತ ಪಾತಕಿ ಬನ್ನಂಜೆ ರಾಜಾ ತನ್ನ ಒಂದು ದಿನವನ್ನು ಮನೆಯವರೊಂದಿಗೆ ಕಳೆದು ಮತ್ತೆ ಉಡುಪಿ ಠಾಣೆಗೆ ತೆರಳಿದ್ದಾನೆ. ಬರೋಬ್ಬರಿ ೨೦ ವರ್ಷಗಳ ನಂತರ ಭೂಗತ ಪಾತಕಿ ಬನ್ನಂಜೆ ರಾಜಾ ಅಲಿಯಾಸ್ ರಾಜೇಂದ್ರ ಕುಮಾರ್ ತನ್ನ ಮನೆಗೆ ಭೇಟಿ ನೀಡಿ ತಾಯಿಯ ಆರೋಗ್ಯ ವಿಚಾರಿಸಿದ್ದಾನೆ. ಮಾನವೀಯ ನೆಲೆಯಲ್ಲಿ ನ್ಯಾಯಾಲಯ ತಾಯಿಯನ್ನು ನೋಡಲು ಬನ್ನಂಜೆಗೆ ಅವಕಾಶ ಮಾಡಿಕೊಟ್ಟಿದ್ದು, ಅನಾರೋಗ್ಯ ಪೀಡಿತ ತಾಯಿ ವಿಲಾಸಿನಿ ಅವರನ್ನು ನೋಡುವ ಸಲುವಾಗಿ ಪೊಲೀಸರು ಬೆಳಗಾವಿ ಹಿಂಡಲಗಾ ಜೈಲಿನಿಂದ ಭಾನುವಾರ ಉಡುಪಿಗೆ ಕರೆ ತಂದಿದ್ದರು.
ಹಲವು ವರ್ಷಗಳ ಬಳಿಕ ಮನೆಗೆ ಬಂದ ರಾಜೇಂದ್ರನನ್ನು ಕಂಡು, ತಾಯಿ ಮತ್ತು ಸಂಬಂಧಿಕರು ಸಂತಸಪಟ್ಟಿದ್ದಾರೆ. ಬನ್ನಂಜೆ ರಾಜಾ ತಾಯಿಯನ್ನು ಮಾತನಾಡಿಸಿದ ಬಳಿಕ ದೈವದ ಗುಡಿಗೆ ಕೈ ಮುಗಿದು ಪ್ರಾಥನೆ ಸಲ್ಲಿಸಿದ್ದಾರೆ. ಬೆಳಗ್ಗೆ ಪೊಲೀಸರು ತಂದುಕೊಟ್ಟ ಪರೀಕ್ಷೆಗೆ ಒಳಪಟ್ಟ ಉಪಹಾರ ಸೇವಿಸಿದ್ದಾರೆ. ಮದ್ಯಾಹ್ನದ ಊಟವನ್ನು ಮನೆಯಲ್ಲಿಯೇ ತಯಾರಿಸಿದ್ದು, ಕೋರಿ ರೊಟ್ಟಿ, ಮೀನಿನ ಖಾದ್ಯವನ್ನು ಬನ್ನಂಜೆ ರಾಜಾ ಕುಟುಂಬದೊಡನೇ ಕುಳಿತು ಸೇವಿಸಿದ್ದಾರೆ.
ಬನ್ನಂಜೆ ರಾಜಾನನ್ನು ನೋಡಲು ಸಂಬಂಧಿಕರು ಹಾಗೂ ಸಹಪಾಠಿ ಸ್ನೇಹಿತರು ಬಂದಿದ್ದರೂ,ಅವರನ್ನು ಮನೆಯ ಒಳಗೆ ಬಿಡದೇ ಒಂದಿಬ್ಬರನ್ನು ಗೇಟಿನಲ್ಲಿಯೇ ನಿಲ್ಲಿಸಿ ಮಾತನಾಡಿಸಲು ಪೊಲೀಸರು ಅವಕಾಶ ಮಾಡಿಕೊಟ್ಟರು.
ಮನೆಯಲ್ಲಿ ತಾಯಿ ನಿವೃತ್ತ ಶಿಕ್ಷಕಿ ವಿಲಾಸಿನಿ , ನಿವೃತ್ತ ಕಂದಾಯ ನಿರೀಕ್ಷಕ ತಂದೆ ಸುಂದರ್ ಶೆಟ್ಟಿಗಾರ್ ಸೇರಿದಂತೆ , ಬನ್ನಂಜೆ ರಾಜ ಸಹೋದರ ಹಾಗೂ ಅವರ ಪತ್ನಿ ಮಕ್ಕಳೊಂದಿಗೆ ಕಾಲ ಕಳೆದರು.