ಕುಂದಾಪುರ, ಜು 10: ಇನ್ನೇನು ಮಾರಾಟವಾಗಬೇಕಾಗಿದ್ದ ಸಿಗಡಿಗಳಿದ್ದ ಕೆರೆಯೊಂದಕ್ಕೆ ದುಷ್ಕರ್ಮಿಗಳು ವಿಷ ಬೆರಕೆ ಮಾಡಿದ ಪರಿಣಾಮ ಲಕ್ಷಾಂತರ ರೂಪಾಯಿಗೂ ಮಿಕ್ಕಿ ಸಿಗಡಿ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಅರಾಟೆ ಸಮೀಪದ ಹೊಸಾಡು ಗ್ರಾಮದಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ನರಸಿಂಹ ಮೊಗವೀರ ಎಂಬುವರಿಗೆ ಸೇರಿದ ಮೂರು ಎಕ್ರೆ ವಿಸ್ತೀರ್ಣದ ಎರಡು ಕೆರೆಗಳಲ್ಲಿ ಒನಾಮಿ ಜಾತಿಯ 6 ಲಕ್ಷ ಮರಿಗಳನ್ನು ಬಿಡಲಾಗಿತ್ತು. 103 ದಿನಗಳ ಬೆಳವಣಿಗೆಯಾಗಿದ್ದರೂ ಮಳೆಗಾಲದ ಹಿನ್ನೆಲೆಯಲ್ಲಿ ಕಂಪೆನಿ ಸಿಗಡಿ ಖರೀದಿಗೆ ಮೀನ ಮೇಷ ಎಣಿಸಿದ್ದರಿಂದ ಸಿಗಡಿಯನ್ನು ಕೆರೆಯಿಂದ ಮೇಲೆತ್ತಿರಲಿಲ್ಲ. ಸುಮಾರು 9 ಟನ್ ತೂಕದ ಸಿಗಡಿಗಳಿದ್ದ ಕೆರೆಗೆ ಸೋಮವಾರ ನಸುಕಿನಲ್ಲಿ ದುಷ್ಕರ್ಮಿಗಳು ತಲಾ 10 ಲೀಟರ್ನ ಎರಡು ಬಕೆಟ್ಗಳಲ್ಲಿ ವಿಷ ಬೆರಕೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬೆಳಿಗ್ಗೆ ಎದ್ದು ಆಹಾರ ಹಾಕಲೆಂದು ಕೆರೆಯ ಮಾಲಕ ನರಸಿಂಹ ಮೊಗವೀರ ಕೆರೆಯ ಬಳಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದ್ದು, ವಿಷ ಬೆರಕೆಗೆ ಬಳಸಿದ್ದ ಬಕೆಟ್ಗಳು ಕೆರೆಯ ಒಳಗೆ ಪತ್ತೆಯಾಗಿವೆ.
ಕೆಲವು ದಿನಗಳ ಹಿಂದೆ ಇನ್ನೊಂದು ಸಿಗಡಿ ಕೆರೆಯನ್ನು ನಡೆಸಲು ಪಾಲುದಾರಿಗೆ ಮಾತುಕತೆ ನಡೆದಿತ್ತು. ಆದರೆ ವ್ಯವಹಾರ ಕುದುರದ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಕಲಹ ನಡೆದಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಆತ ಸಿಗಡಿ ನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದ್ದು, ಆತನಿಂದಲೇ ಈ ದುಷ್ಕೃತ್ಯ ನಡೆದಿರಬಹುದು ಎಂದು ಕೆರೆ ಮಾಲಕ ನರಸಿಂಹ ಮೊಗವೀರ ಆರೋಪಿಸಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.