ಮಂಗಳೂರು, ಜು 10: ಮಾಜಿ ಉನ್ನತ ಶಿಕ್ಷಣ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಬಿ.ಎ. ಮೊಹಿದಿನ್ (81) ಅವರು ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇತ್ತೀಚೆಗಷ್ಟೇ ಅವರು ಅನಾರೋಗ್ಯಕ್ಕೀಡಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಚಿಕಿತ್ಸೆಯಿಂದ ಚೇತರಿಸಿಕೊಂಡ ಬಳಿಕ ಕಳೆದ ವಾರ ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಮತ್ತೆ ಅನಾರೋಗ್ಯಕ್ಕೆ ಒಳಗಾದ ಅವರು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.
ಬೆಂಗಳೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಟ್ಟ ಬಳಿಕ ಮಂಗಳೂರು ಸಮೀಪದ ಬಜ್ಪೆಯಲ್ಲಿರುವ ಅವರ ಸ್ವಗೃಹಕ್ಕೆ ಮೃತದೇಹ ತರಲಾಗುವುದು. ಬಳಿಕ ಬಜ್ಪೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.