ಮಂಗಳೂರು ಸೆ 27:ಅಂಗನವಾಡಿಗಳಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಪೌಷ್ಟಿಕ ಆಹಾರ ಬಿಸಿ ಊಟ ನೀಡುವ ‘ಮಾತೃಪೂರ್ಣ’ ಯೋಜನೆ ಅಕ್ಟೋಬರ್ 2 ಗಾಂಧೀ ಜಯಂತಿಯಂದು ಜಿಲ್ಲೆಯಲ್ಲಿ ಚಾಲನೆ ದೊರೆಯಲಿದೆ.
ಅ.2ರಂದು ಮಧ್ಯಾಹ್ನ 2 ಗಂಟೆಗೆ ಬಂಟ್ವಾಳ ತಾಲೂಕಿನ ನರಿಕೊಂಬು ಅಂಗನವಾಡಿಯಲ್ಲಿ ಅರಣ್ಯ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿಯಲ್ಲಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರ ಆರೋಗ್ಯದಲ್ಲಿನ ಪೌಷ್ಠಿಕಾಂಶದ ಸುಧಾರಣೆಗೆ ಅಂಗನವಾಡಿ ಕೇಂದ್ರಗಳಲ್ಲಿಯೇ ಅಡುಗೆ ತಯಾರಿಸಿ ಮಧ್ಯಾಹ್ನದ ಸಮಯದಲ್ಲಿ ಕೊಡಲ್ಪಡುವ ವೈಶಿಷ್ಠ ಪೂರ್ಣ ಯೋಜನೆಯಾಗಿದೆ.
ಈ ಯೋಜನೆಯಡಿ ಮಧ್ಯಾಹ್ನದ ಪೌಷ್ಠಿಕ ಬಿಸಿ ಊಟದಲ್ಲಿ ಅನ್ನ, ಸಾಂಬರ್, ಪಲ್ಯದ ಜೊತೆಗೆ ಬೇಯಿಸಿದ ಮೊಟ್ಟೆ ಮತ್ತು ಹಾಲು ಒಳಗೊಂಡಿದೆ. ಪ್ರತೀ ತಿಂಗಳಿನಲ್ಲಿ 25 ದಿನಗಳಂತೆ, ವರ್ಷದಲ್ಲಿ ಒಟ್ಟು 300 ದಿನಗಳು ಪೌಷ್ಟಿಕ ಆಹಾರ ನೀಡಲಾಗುತ್ತದೆ. ಮೊಟ್ಟೆ ತಿನ್ನದವರಿಗೆ ಮೊಳಕೆ ಬರಿಸಿದ ಕಾಳು ಕೊಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.