ಬೆಂಗಳೂರು,ಜು 09 : ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಅಪರಾಧಗಳನ್ನು ನಿಯಂತ್ರಿಸುವ ಜವಾಬ್ದಾರಿ ಪೊಲೀಸರದ್ದು. ಅವರೆಲ್ಲ ಆರೋಗ್ಯವಂತರಾಗಿ ಹಾಗೂ ಸದೃಢರಾಗಿರಬೇಕು. ಹೀಗಾಗಿ ಅಗತ್ಯಕ್ಕಿಂತ ಹೆಚ್ಚಿನ ತೂಕವುಳ್ಳ ಕೆಎಸ್ಆರ್ಪಿ ಪೊಲೀಸರು ತಮ್ಮ ಎತ್ತರಕ್ಕೆ ಅನುಗುಣವಾಗಿ ತೂಕ ಇಳಿಸಿಕೊಳ್ಳಬೇಕು ಎಂದು ಎಡಿಜಿಪಿ ಭಾಸ್ಕರ್ ರಾವ್ ಸುತ್ತೋಲೆ ಹೊರಡಿಸಿದ್ದಾರೆ.
ಕೆಎಸ್ಆರ್ಪಿ ಯೂ ಒಂದು ಪ್ರಹರ ದಳವಾಗಿದ್ದು, ಈ ಪಡೆಗಳಲ್ಲಿ ಕರ್ತವ್ಯವನ್ನು ನಿರ್ವಹಿಸುವ ಸಿಬ್ಬಂದಿಯೂ ಉತ್ತಮ ಆರೋಗ್ಯ ಕಾಪಾಡಿಕೊಂಡು, ನಿರಂತರವಾಗಿ ಕಾರ್ಯ ಚಟುವಟಿಕೆಯಲ್ಲಿ ತೊಡಗುವುದು ಅವಶ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಎಸ್ಆರ್ಪಿ ಯಲ್ಲಿ ನಾನಾ ತರದ ಕಾರಣಗಳಿಂದ ನಿಧನ ಹೊಂದುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಇದಕ್ಕೆ ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಪದ್ಧತಿ ಹಾಗೂ ಯಾವುದೇ ವ್ಯಾಯಾಮದಂತಹ ಚಟುವಟಿಕೆಗಳು ಇಲ್ಲದಿರುವುದು ಇದಕ್ಕೆ ಕಾರಣವಾಗಿರಬಹುದು.
ಹೀಹಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಎತ್ತರಕ್ಕೆ ತಕ್ಕಂತಹ ತೂಕ ಅವಶ್ಯವಾಗಿರುತ್ತದೆ. ನಿಗದಿಗಿಂತ ಹೆಚ್ಚಿನತೂಕ ಹೊಂದಿದರೆ, ಸಮರ್ಥವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಆದಷ್ಟು ಶೀಘ್ರದಲ್ಲೇ ಎಲ್ಲಾ ಪಡೆಯ ಕಮಾಂಡೆಂಟ್ ಗಳು ತಮ್ಮ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತೂಕದ ವಿವರಗಳನ್ನು ಒಂದು ಪುಸ್ತಕದಲ್ಲಿ ಉಲ್ಲೇಖಿಸಬೇಕು. ಅಗತ್ಯಕ್ಕಿಂತ ಹೆಚ್ಚಿನ ತೂಕವುಳ್ಳ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಪ್ರತ್ಯೇಕಿಸಿ ಅಂತಹವರ ದೇಹದ ತೂಕವನ್ನು ಕಡ್ಡಾಯವಾಗಿ ಕಡಿಮೆ ಮಾಡಲು ಈ ಸುತ್ತೋಲೆಯಲ್ಲಿ ಸೂಚಿಸಿಲಾಗಿದೆ.