ಚಿತ್ರದುರ್ಗ, ಜು 08 : ಕೊಲೆ ನಡೆದ 11 ದಿನಗಳಲ್ಲೇ ಪ್ರಕರಣ ಇತ್ಯರ್ಥಗೊಳಿಸಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹೊಸ ದಾಖಲೆ ಬರೆದಿದ್ದಾರೆ. ಇದು ನ್ಯಾಯಾಲಯದ ಇತಿಹಾಸದ ಅಪರೂಪದ ಆದೇಶವಾಗಿದ್ದು, ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದ ವಿಚಾರಣೆಯನ್ನು 11 ದಿನಗಳಲ್ಲಿ ಪೂರ್ಣಗೊಳಿಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಅಪರಾಧಿ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶನಿವಾರ ಆದೇಶ ನೀಡಿತು. ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ಅಪರೂಪದ ಆದೇಶವನ್ನು ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ನೀಡಿದ್ದಾರೆ.
ಚಳ್ಳಕೆರೆ ತಾಲೂಕಿನ ವಲಸೆ ಗ್ರಾಮದ 75 ವರ್ಷದ ಪರಮೇಶ್ವರ ಸ್ವಾಮಿ ಎಂಬಾತ 65 ವರ್ಷದ ತನ್ನ ಹೆಂಡತಿ ಪುಟ್ಟಮ್ಮಳ ಶೀಲ ಶಂಕಿಸಿ ಜೂ. 27ರಂದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಈ ಸಂಬಂಧ ತಳಕು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದೇ ಮಧ್ಯಾಹ್ನ ಮೂರು ಗಂಟೆಗೆ ಆರೋಪಿ ಪರಮೇಶ್ವರ ಸ್ವಾಮಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ಜುಲೈ ೩ ರಂದು ಪ್ರಕರನವನ್ನು ಕೈಗೆತ್ತಿಕೊಂದ ನ್ಯಾಯಧೀಶರು ದಂಪತಿಯ ಪುತ್ರ ಸೇರಿ 17 ಸಾಕ್ಷ್ಯಗಳನ್ನು ಮೂರು ದಿನಗಳ ಕಾಲ ನ್ಯಾಯಾಲಯ ವಿಚಾರಣೆಗೆ ಒಳಪಡಿಸಿತು. ಬಳಿಕ ವಾದ ವಿವಾದಗಳನ್ನು ಅಲಿಸಿದ ನ್ಯಾಯಧೀಶರು ೫೦ ಪುಟಗಳ ಆದೇಶವನ್ನು ಬರೆದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಪರಮೇಶ್ವರ ಸ್ವಾಮಿಗೆ ಜುಲೈ 7ರಂದು ಜೀವಾವಧಿ ಶಿಕ್ಷೆ ಹಾಗೂ ಐದು ಸಾವಿರ ರುಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಬಿ.ಜಯರಾಂ ವಾದ ಮಂಡಿಸಿದ್ದರು. ಇಲ್ಲಿ ತಾಯಿಗೆ ತಂದೆ ನೀಡುತ್ತಿದ್ದ ಹಿಂಸೆಯನ್ನು ಅವರ ಪುತ್ರ ಗಿರೀಶ್ (39 ) ನ್ಯಾಯಾಲಯದ ಬಳಿ " ತಂದೆ ವಿರುದ್ದ ಸಾಕ್ಷ್ಯ ನುಡಿಯಲು ಯಾವುದೇ ಅಳುಕಿಲ್ಲ ಸತ್ಯ ಹೇಳದಿದ್ದರೆ ತಾಯಿ ಆತ್ಮಕ್ಕೆ ಶಾಂತಿ ಸಿಗದು" ಎಂದು ಹೇಳಿದ್ದು ನ್ಯಾಯಾಲಯಕ್ಕೆ ಬಲವಾದ ಸಾಕ್ಷ್ಯವಾಯಿತು.