ಮಂಗಳೂರು, ಜು 08 : ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂದಿನ ಗ್ರೌಂಡ್ ನಲ್ಲಿ 2009 ರಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪದಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತ ಅವರನ್ನು ಖುಲಾಸೆಗೊಳಿಸಿ ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
2009 ಫೆ 12 ರಂದು ನಡೆದಿದ್ದ ಹಿಂದೂ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಷಣಕಾರರಾಗಿ ಭಾಗವಹಿಸಿದ್ದ, ಜಗದೀಶ್ ಕಾರಂತ , ನಳೀನ್ ಕುಮಾರ್ ಕಟೀಲ್ ಸೇರಿದಂತೆ ಹನ್ನೆರಡು ಮಂದಿ ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸುಳ್ಯ ಪೊಲೀಸರು, ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿದ್ದರು.
ಸುಪ್ರಿಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಹೈಕೋರ್ಟ್ ಸ್ಥಾಪಿಸಿದ ಶಾಸಕರು ಹಾಗೂ ಸಂಸದರ ಮೇಲೆ ದಾಖಲಾದ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆ ವಿಶೇಷ ನ್ಯಾಯಾಲಯ ಈ ಪ್ರಕರಣವನ್ನು ಕೈಗೆತ್ತಿಕೊಂಡು ಎಲ್ಲಾ ಆರೋಪಿಗಳನ್ನು ದೋಷ ಮುಕ್ತಗೊಳಿಸಿ ತೀರ್ಪು ಪ್ರಕಟಿಸಿದೆ. ಅಂದಿನ ಲೋಕಸಭಾ ಚುನಾವಣೆಯ ಮುಂಚಿತವಾಗಿ ಈ ಘಟನೆ ನಡೆದದ್ದರಿಂದ ರಾಜಕೀಯವಾಗಿ ಅಂದು ಹೆಚ್ಚು ಮಹತ್ವ ಪಡೆದಿತ್ತು.