ಬಂಟ್ವಾಳ, ಜು 08: ಶುಕ್ರವಾರ ರಾತ್ರಿಯಿಂದೀಚೆಗೆ ಬಂಟ್ವಾಳ ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಹಲವೆಡೆಗಳಲ್ಲಿ ಗುಡ್ಡ ಕುಸಿತ, ಗೋಡೆ ಕುಸಿತ, ತೋಟಗಳಿಗೆ ನೀರು ನುಗ್ಗಿದ ಘಟನೆಗಳು ನಡೆದಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಜೀವನದಿ ನೇತ್ರಾವತಿ ಅಪಾಯಮಟ್ಟದಲ್ಲಿ ಹರಿಯುತ್ತಿದೆ.
ಕೆದಿಲ ಗ್ರಾಮದ ಪೂವಮ್ಮ ಎಂಬವರು ಗೋಡೆ ಕುಸಿತದಿಂದ ಕಾಲು ಮುರಿತಕ್ಕೆ ಒಳಗಾಗಿದ್ದು, ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 8 ಮೀಟರ್ ಎತ್ತರದಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದು (ಗರಿಷ್ಠ 9 ಮೀ.) ಅಪಾಯದ ಕರೆಗಂಟೆ ಬಾರಿಸುತ್ತಿದೆ. ಶನಿವಾರ ತಾಲೂಕಿನ ಹಲವು ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿತ್ತು.
ಬಂಟ್ವಾಳ ಪುರಸಭಾ ವ್ಯಾಪ್ತಿ ಸಹಿತ ತಾಲೂಕಿನ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಭಂಡಾರಿಬೆಟ್ಟು ರಾಜಾಕಾಲುವೆ ಉಕ್ಕಿ ಹರಿದಿದ್ದು ಮತ್ತೆ ದ್ವೀಪಸದೃಶ ವಾತಾವರಣ ನಿರ್ಮಾಣಗೊಂಡಿದೆ. ಪಾಣೆಮಂಗಳೂರಿನ ಆಲಡ್ಕ ಎಂಬಲ್ಲಿ ನೇತ್ರಾವತಿ ನದಿ ಏರಿಕೆಯಿಂದಾಗಿ ಮೈದಾನ ಪಕ್ಕದ ನಾಲ್ಕೈದು ಮನೆಗಳನ್ನು ಸ್ಥಳಾಂತರಿಸಲಾಗಿದೆ. ಪುರಸಭಾ ವ್ಯಾಪ್ತಿಯ ಪಲ್ಲಮಜಲ್ ಎಂಬಲ್ಲಿ ಹಸನಬ್ಬ ಎಂಬವರ ಮನೆಯ ಆವರಣ ಕುಸಿದಿದ್ದು, ಮನೆ ಅಪಾಯದಲ್ಲಿದೆ.
ಸುಮಾರು 50 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಪಲ್ಲಮಜಲ್ ಎಂಬಲ್ಲಿ ಅಬೂಬಕರ್ ಹಾಜಿ ಬ್ಯಾರಿ ಎಂಬವರ ಆವರಣ ಗೋಡೆ ಕುಸಿದು 30 ಸಾವಿರ ರೂ. ನಷ್ಟ, ಬಿ.ಮೂಡ ಗ್ರಾಮದ ಮದ್ವ ಎಂಬಲ್ಲಿ ಅಬ್ದುಲ್ ಲತೀಫ್ ಎಂಬರ ಮನೆಗೆ ತಡೆಗೋಡೆ ಕುಸಿದು ಹಾನಿಯಾಗಿದ್ದು, ಸುಮಾರು ೫೦ ಸಾವಿರ ನಷ್ಟ ಉಂಟಾಗಿದೆ. ಶಂಭೂರು ಎಎಂಆರ್ ಡ್ಯಾಂಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದ್ದು ಬಂದಿದ್ದು, ನೀರು ಬಿಡುಗಡೆ ಮಾಡುವ ಸಲುವಾಗಿ ಯಾರೂ ನದಿ ತೀರಕ್ಕೆ ಬಾರದಂತೆ ಶನಿವಾರ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿದೆ.
ಪುದು ಬದಿಗುಡ್ಡೆ ಎಂಬಲ್ಲಿ ಸೇಸಮ್ಮ ಎಂಬವರ ಮನೆ ತಡೆಗೋಡೆ ಕುಸಿದಿದ್ದು, ಚಂದ್ರಾವತಿ ಎಂಬವರ ಮನೆಗೆ ಬಿದ್ದು ನಷ್ಟ ಉಂಟಾಗಿದೆ. ಉಳಿ ಊರಿಂಜೆ ಮನೆ ಚೆನ್ನಪ್ಪ ಕುಲಾಲ್ ಅವರ ಮನೆಗೆ ಹಾನಿಯಾಗಿದ್ದರೆ, ನಾವುರ ಎಂಬಲ್ಲಿ ಯಶೋಧರ ಪೂಜಾರಿ ಎಂಬವರ ಮನೆಯೊಂದು ಕುಸಿಯುವ ಹಂತದಲ್ಲಿದೆ. ಅಮ್ಟಾಡಿ ಗ್ರಾಮದ ಉದಲೆಕೋಡಿ ಎಂಬಲ್ಲಿ ಗುಡ್ಡ ಜರಿದು, ತೋಡಿನ ನೀರು ಸ್ಥಗಿತಗೊಂಡಿದ್ದು, ಸಮೀಪದ ಮನೆಯ ಅಂಗಳ ಜಲಾವೃತವಾಗಿದೆ. ತೆಂಕಕಜೆಕಾರು ಗ್ರಾಮದ ಕಜೆಕಾರು ದೇವಸ್ಥಾನ ಸಮೀಪ ಗುಡ್ಡೆ ಕುಸಿದು ಹಾನಿಯಾಗಿದೆ. ರಾಜಕಾಲುವೆ ಒತ್ತುವರಿಯಂದಾಗಿ ಹಲವರ ಜಮೀನು ಜಲಾವೃತಗೊಂಡಿದ್ದು, ಅಪಾರ ಪ್ರಮಾಣದ ಕೃಷಿ ನಾಶವಾದ ಘಟನೆ ನರಿಕೊಂಬು ಗ್ರಾಮದ ನಾಯಿಲದಲ್ಲಿ ನಡೆದಿದೆ.
ನಾಯಿಲ ನಿವಾಸಿಗಳಾದ ಬಾನು ಪೂಜಾರಿ, ಪ್ರಕಾಶ, ರಾಮಚಂದ್ರ, ರಾಮಮೂಲ್ಯ, ನಿಕಿಲ್ ಕೊಲ್ಪೆ, ಜತ್ತಪ್ಪ ಶೆಟ್ಟಿ, ದಯಾನಂದ, ಬೋಜ, ಚೆನ್ನಪ್ಪ, ಉಮನಾಥ, ಶಿವಪ್ಪ, ವಿಶ್ಬನಾಥ, ವೆಂಕಪ್ಪ, ಲಕ್ಷಣ, ಜಯ, ರಂಗಪ್ಪ ಎಂಬವರ ಅಡಿಕೆ ಕ್ರಷಿ, ಭತ್ತದ ಕ್ರಷಿ, ತೆಂಗು ತೋಟ ಕ್ರತಕ ನೀರಿನ ನೆರೆಯಿಂದ ಸುಮಾರು 15 ದಿನಗಳಿಂದ ಮುಳುಗಡೆಯಾಗಿದೆ.
ಮುಲ್ಲರಪಟ್ನದಲ್ಲಿ ಮತ್ತೆ ಸಂಕಷ್ಟ:
ಮುಲ್ಲರಪಟ್ನದಲ್ಲಿ ತೂಗುಸೇತುವೆ ಸಂಪರ್ಕ ರಸ್ತೆಯೂ ಜಲಾವೃತವಾಗಿದ್ದು, ನಡೆಯಲು ಕಷ್ಟವಾಗಿದೆ. ಇಲ್ಲಿಗೆ ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್ ಭೇಟಿ ನೀಡಿ ಅಧಿಕಾರಿಗಳಿಗೆ ಸುಗಮ ಸಂಚಾರಕ್ಕೆ ಸೂಚನೆ ನೀಡಿದರು.
ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್ ಅವರು ತಹಶೀಲ್ದಾರ್ ಪುರಂದರ ಹೆಗ್ಡೆ ಅವರೊಂದಿಗೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕು ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ, ಕಂದಾಯ ನಿರೀಕ್ಷಕ ನವೀನ್ ಬೆಂಜನ ಪದವು ಗ್ರಾಮ ಲೆಕ್ಕಾಧಿಕಾರಿ ಜನಾರ್ಧನ ಜೆ, ತಾಲೂಕು ಕಚೇರಿ ಸಿಬಂದಿ ಸದಾಶಿವ ಕೈಕಂಬ, ಸುಂದರ, ಶಿವ ಪ್ರಸಾದ್, ಲೋಕನಾಥ್ ಜತೆಗಿದ್ದರು.
ಇನ್ನು ವರುಣನ ಅಬ್ಬರಕ್ಕೆ ವಿಟ್ಲ ಭಾಗದಲ್ಲಿ ರಸ್ತೆಗಳು ಜಲವೃತಗೊಂಡಿದೆ. ಗುಡ್ಡಗಳು ಕುಸಿದು, ರಸ್ತೆಗೆ ಮರಗಳು ಬಿದ್ದು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.
ವಿಟ್ಲ-ಸಾಲೆತ್ತೂರು-ಮಂಗಳೂರು ರಸ್ತೆಯ ಕುಡ್ತಮುಗೇರು ಎಂಬಲ್ಲಿ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ವಿಟ್ಲ-ಸಾಲೆತ್ತೂರು-ಮಂಗಳೂರು ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಜಲವೃತಗೊಂಡಿದೆ. ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಅಬೂಬಕರ್ ಹಾಜಿ ಎಂಬವರ ತೋಟಕ್ಕೆ ನೀರು ನುಗ್ಗಿ ಬೆಳೆ ನಾಶಗೊಂಡಿದೆ. ಮೂರುಕಜೆ ಎಂಬಲ್ಲಿ ತೋಟಕ್ಕೆ, ಕಾಪುಮಜಲು ದೇವಸ್ಥಾನ, ಪರ್ತಿಪ್ಪಾಡಿ ಮಸೀದಿ ಆವರಣಕ್ಕೆ ನೀರು ನುಗ್ಗಿದೆ. ಹಲವೆಡೆ ಕೃಷಿಗೆ ಹಾನಿಯಾಗಿದೆ.