ಮಂಗಳೂರು, ಜು07: ಕರ್ನಾಟಕದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಿಜೆಪಿಯ ಪ್ರಮುಖ ಗುರಿಯಾಗಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಡಿಯೂರಪ್ಪ ಮತ್ತೆ ಸಿಎಂ ಆಗಬೇಕು. ಈ ಮೂಲಕ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ಇದು ನಮ್ಮ ಪಕ್ಷದ ಪ್ರಮುಖ ಗುರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರ ಮಂಡಿಸಿರುವ ಬಜೆಟ್ ಬಗ್ಗೆ ಮಾತನಾಡಿದ ಅವರು, ಕರಾವಳಿ ಕರ್ನಾಟಕವನ್ನು ಸಿಎಂ ಕುಮಾರಸ್ವಾಮಿ ನಿರ್ಲಕ್ಷ್ಯ ಮಾಡಿದ್ದಾರೆ. ಮೀನುಗಾರರ ರಕ್ಷಣೆಗೆ ಸರ್ಕಾರ ಯಾವುದೇ ರೀತಿಯ ಅನುದಾನ ನೀಡಿಲ್ಲ. ವಿದ್ಯುತ್ ಸೇರಿದಂತೆ ಪೆಟ್ರೋಲ್ ದರ ಏರಿಸಲಾಗಿದೆ. ಈ ಮೂಲಕ ಕುಮಾರಸ್ವಾಮಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇಂತಹ ಬೇಜವಾಬ್ದಾರಿ ಸರ್ಕಾರವನ್ನು ನಾನು ಇತಿಹಾಸದಲ್ಲೇ ಕಂಡಿಲ್ಲ ಎಂದು ಗರಂ ಆಗಿದ್ದಾರೆ.
ಕರಾವಳಿ ಜಿಲ್ಲೆಯ ಜನತೆಗೆ ನ್ಯಾಯ ದೊರಕಿಸಿ ಕೊಡಲು ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದಾರೆ. ನಾವೆಲ್ಲರೂ ಸೇರಿ ಕರಾವಳಿಯ ಸಮಗ್ರ ಅಭಿವೃದ್ಧಿಗಾಗಿ ಧ್ವನಿ ಎತ್ತಲಿದ್ದೇವೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಪರವಾಗಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡಿದ್ದೇವೆ. ಮುಂದೆಯೂ ನಾವೆಲ್ಲರೂ ಒಟ್ಟಾಗಿ ಸೇರಿ ಸಂಘಟನಾತ್ಮಕ ಹೋರಾಟ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಸಿಎಂ ಕುಮಾರಸ್ವಾಮಿ ಮಂಗಳೂರು, ಉಡುಪಿ, ಕಾರವಾರ ಜಿಲ್ಲೆಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಇದರ ವಿರುದ್ಧ ಸದನದಲ್ಲಿ ಹೋರಾಡಿ ನಾವು ಗೆಲ್ಲುತ್ತೇವೆ. ಸಿಎಂ ಮಂಡಿಸಿರುವ ಬಜೆಟ್ ಜೆಡಿಎಸ್ ಶಾಸಕರ ಬಜೆಟ್. ಇದು ಕರ್ನಾಟಕ ಸರಕಾರದ ಬಜೆಟ್ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಹಳ ದಿನ ಈ ಮೈತ್ರಿ ಸರಕಾರ ಉಳಿಯಲ್ಲ. ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹದಗೆಡುತ್ತಿದೆ. ಈ ಕುರಿತು ಸ್ವತಃ ಮುಖ್ಯಮಂತ್ರಿಗೆ ಮನವರಿಕೆಯಾಗಿದೆ. ಎಲ್ಲಾ ಸಮಸ್ಯೆಗಳಿಗೂ ಸಿಎಂ ಕುಮಾರಸ್ವಾಮಿಯೇ ಹೊಣೆಯಾಗಲಿದ್ದಾರೆ ಎಂದು ಕಿಡಿ ಕಾರಿದರು.