ಮಂಗಳೂರು, ಜು07: ನಗರದ ಮಾಜಿ ಶಾಸಕ ಜೆ.ಆರ್ ಲೋಬೊ ಅವರನ್ನು ಖದೀಮರು ಯಾಮಾರಿಸಿ ಹಣ ವಂಚಿಸಿದ ಪ್ರಸಂಗ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ನಗರದ ಮಾಜಿ ಶಾಸಕ ಜೆ ಆರ್ ಲೋಬೋ ಅವರಿಗೆ ಖದೀಮರು ಮೊಬೈಲ್ ಕರೆ ಮಾಡಿ, ಅವರಿಂದ ಎ.ಟಿ.ಎಂ ಕಾರ್ಡ್ ವಿವರ ಪಡೆದು ಹಣ ವಂಚಿಸಿದ್ದಾರೆ. ಸ್ಟೆಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಕರೆಮಾಡಿರುವುದಾಗಿ ಹೇಳಿದ ಖದೀಮರು, ನೀವು ಎ.ಟಿ.ಎಂ ಕಾರ್ಡ್ ಕೀ ವಿವರ ನೀಡಿಲ್ಲ, ಈ ಕಾರಣ ನಿಮ್ಮ ಎ.ಟಿ.ಎಂ ಕಾರ್ಡ್ ಬ್ಲಾಕ್ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನು ನಂಬಿದ ಶಾಸಕರು, ಓ.ಟಿ.ಪಿ ನಂಬರ್ ಖದೀಮರಿಗೆ ನೀಡಿದ್ದಾರೆ. ಇದನ್ನೇ ಸದುಪಯೋಗಪಡಿಸಿಕೊಂಡ ಖದೀಮರು ಮಾಜಿ ಶಾಸಕ ಜೆ.ಆರ್ ಲೋಬೊ ಅವರ ಖಾತೆಯಿಂದ 50 ಸಾವಿರ ರೂಪಾಯಿ ಪಡೆದು ವಂಚನೆ ನಡೆಸಿದ್ದಾರೆ.
ಈ ಕುರಿತು ಮಾಜಿ ಶಾಸಕ ಜೆ.ಆರ್ ಲೋಬೊ ಮಂಗಳೂರಿನ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.