ಉಡುಪಿ, ಜು06: ತಾಯಿಯ ಅನಾರೋಗ್ಯ ಹಿನ್ನೆಲೆಯಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾನಿಗೆ ಒಂದು ದಿನದ ಮಟ್ಟಿಗೆ ಜೈಲಿನಿಂದ ಹೊರಬರಲು ನ್ಯಾಯಾಧೀಶರು ಅನುಮತಿ ನೀಡಿದ್ದಾರೆ.
ಬನ್ನಂಜೆ ರಾಜಾ ಮೊರಾಕ್ಕೋದಲ್ಲಿ 2015ರಲ್ಲಿ ಬಂಧನಕ್ಕೊಳಗಾಗಿದ್ದನು. ಇದೀಗ ಪೆರೋಲ್ ಮೇಲೆ ಭೂಗತ ಪಾತಕಿ ಬನ್ನಂಜೆ ರಾಜಾ ಹೊರ ಬರಲಿದ್ದಾನೆ. ಸದ್ಯ ಬೆಳಗಾವಿಯ ಹಿಂಡಲಗಾ ಜೈಲಲ್ಲಿರುವ ಬನ್ನಂಜೆ ರಾಜ ಉಡುಪಿಗೆ ಬರಲಿದ್ದಾನೆ ಎಂದು ಮೂಲಗಳು ತಿಳಿಸಿದೆ.
ಜು. 8ರಂದು ಉಡುಪಿಯಲ್ಲಿರುವ ತನ್ನ ತಾಯಿ ಮನೆಗೆ ಬರಲು ನ್ಯಾಯಾಲಯದ ಮುಂದೆ ಅನುಮತಿ ಕೋರಿದ್ದನು. ಇದೀಗ ನ್ಯಾಯಾಧೀಶರಿಂದ ವಿಶೇಷ ಅನುಮತಿಯೂ ಸಿಕ್ಕಿದ್ದು, ಅನಾರೋಗ್ಯ ಪೀಡಿತ ತಾಯಿಯನ್ನು ಬನ್ನಂಜೆ ರಾಜಾ ಭೇಟಿ ಮಾಡಲಿದ್ದಾನೆ.
ಈತನ ಭೇಟಿ ಹಿನ್ನೆಲೆ, ಉಡುಪಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳುವ ಸಾಧ್ಯತೆಯಿದೆ. ಶೂಟೌಟ್, ದರೋಡೆ, ಕೊಲೆ ಪ್ರಕರಣ ಸೇರಿದಂತೆ 16 ಕ್ರಿಮಿನಲ್ ಪ್ರಕರಣಗಳು ಈತನ ಮೇಲಿದ್ದು, ವಿಚಾರಣೆ ನಡೆಯುತ್ತಲೇ ಇದೆ. ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಬನ್ನಂಜೆ ರಾಜನ ಮೇಲೆ 45 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.
ಉಡುಪಿ ಭೇಟಿ ವೇಳೆ ಬನ್ನಂಜೆ ರಾಜನನ್ನು ಸ್ವಾಗತಿಸಲು ಆತನ ಬಂಟರು ಸಿದ್ದರಾಗಿದ್ದಾರೆ ಅನ್ನುವ ಮಾಹಿತಿಯೂ ಲಭಿಸಿದೆ.