ಮಂಗಳೂರು, ಜು06: ಈ ಬಾರಿಯ ಬಜೆಟ್ನಲ್ಲಿ ಎಂಡೋ ಸಂತ್ರಸ್ತರಿಗೆ ಯಾವುದೇ ರೀತಿಯ ಪರಿಹಾರ ಕೊಡದಿರುವ ಕುರಿತು ನೋವಿದೆ. ಎಂಡೋ ಸಂತ್ರಸ್ತರಿಗೆ ಸೂಕ್ತ ಸೌಲಭ್ಯ ದೊರಕಿಸಿ ಕೊಡುವುದು ನನ್ನ ಮೊದಲ ಆದ್ಯತೆಯಾಗಿದ್ದು, ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ
ದಾಯ್ಜಿವರ್ಲ್ಡ್ ವಾಹಿನಿಯ ಜೊತೆ ಮಾತನಾಡಿದ ಅವರು, ಈ ಬಜೆಟ್ನಲ್ಲೂ ಎಂಡೋ ಸಂತ್ರಸ್ತರಿಗೆ ಸರಕಾರ ಯಾವುದೇ ಪರಿಹಾರ ಕೊಟ್ಟಿಲ್ಲ. ಅಧಿವೇಶನದಲ್ಲಿ ಜನಪ್ರತಿನಿಧಿಗಳು ತಮ್ಮ ಧ್ವನಿಯಾಗುತ್ತಾರೆ ಎಂದು ಎಂಡೋ ಸಂತ್ರಸ್ತರು ಕಾಯುತ್ತಿದ್ದಾರೆ. ಆದರೆ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ. ಒಂದು ವೇಳೆ ಸರಕಾರದಿಂದ ಸೌಲಭ್ಯಗಳು ಸಿಕ್ಕಿದರೆ ಅವರ ನರಕಯಾತನೆ ಕಡಿಮೆಯಾಗಬಹುದು. ಎಂಡೋ ಸಂತ್ರಸ್ತರ ನೋವು ಹತ್ತಿರ ನಿಂತು ನೋಡಿದವರಿಗೆ ಮಾತ್ರ ತಿಳಿಯುತ್ತದೆ. ಅವರ ನೋವಿಗೆ ಸರಕಾರ ಸ್ಪಂದಿಸದಿದ್ದರೆ, ಬೇರೆ ಯಾರು ಸ್ಪಂದಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಕಳೆದ ಅನೇಕ ವರುಷಗಳ ಹಿಂದೆ ಸರಕಾರ ಮಾಡಿದ ತಪ್ಪಿಗೆ ಜನರು ಶಿಕ್ಷೆ ಅನುಭವಿಸುವಂತಾಗಿದೆ. ಸರಕಾರ ಮಾಡಿದ ತಪ್ಪಿಗೆ ಸರ್ಕಾರದಿಂದಲೇ ಪರಿಹಾರ ನೀಡಬೇಕು. ಎಂಡೊ ಸಂತ್ರಸ್ತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು. ನೋಡಲು, ಅನುಭವಿಸಲು ಅಸಾಧ್ಯವಾಗದ ರೀತಿಯಲ್ಲಿ ಎಂಡೋ ಸಂತ್ರಸ್ತರು ಬದುಕು ಹೆಣೆಯುತ್ತಿದ್ದಾರೆ. ದುಡಿದು ಸಂಪಾದಿಸುವಂತಹ ಶಕ್ತಿ ಅವರಲ್ಲಿಲ್ಲ. ನರಳಾಟದ ಬದುಕು ನೀಡಿದ ಸರ್ಕಾರವೇ ಎಂಡೋ ಪೀಡಿತರಿಗೆ ಹಕ್ಕಿನ ಸವಲತ್ತನ್ನು ನೀಡಬೇಕು ಎಂದು ಒತ್ತಾಯಿಸಿದರು.
ಯಾವುದೇ ಕಾರಣಕ್ಕೂ ಎಂಡೋ ಸಂತ್ರಸ್ತರ ಸಮಸ್ಯೆಯನ್ನು ರಾಜಕೀಯ ಕಣ್ಣಿನಿಂದ ನೋಡಬೇಡಿ. ಕೇರಳ ಸರಕಾರವು ಅಲ್ಲಿನ ಎಂಡೋ ಸಂತ್ರಸ್ತರಿಗೆ ಸ್ಮಾರ್ಟ್ ಕಾರ್ಡ್ ನೀಡಿ ಉತ್ತಮ ಸವಲತ್ತುಗಳನ್ನು ನೀಡುತ್ತಿದೆ. ಎಂಡೋ ಸಂತ್ರಸ್ತರ ನೋವಿಗೆ ಕೇರಳ ಸರಕಾರ ಸ್ಪಂದಿಸುತ್ತಿದೆ. ಕೇರಳದಲ್ಲಿ ಎಂಡೋಪೀಡಿತರಿಗೆ ನ್ಯಾಯೋಚಿತ ಸೌಲಭ್ಯ ಒದಗಿಸಲು ಸಾಧ್ಯವಿರುವಾಗ ನಮ್ಮ ಸರಕಾರಕ್ಕೆ ಯಾಕೆ ಒದಗಿಸಲು ಅಸಾಧ್ಯ ಎಂದು ಪ್ರಶ್ನಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಸುಸಜ್ಜಿತವಾದ ಎಂಡೋ ಪುನರ್ವಸತಿ ಕೇಂದ್ರ ಸ್ಥಾಪನೆಯಾಗಬೇಕು. ಈ ಮೂಲಕ ಎಂಡೋ ಸಂತ್ರಸ್ತರ ನೋವಿಗೆ ಸ್ಪಂದಿಸಬೇಕು. ಸಂತ್ರಸ್ತರ ಚಿಕಿತ್ಸೆಗೆ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಬಳಸಬೇಕು. ಕಷ್ಟದಿಂದ ಜೀವನ ನಿರ್ವಹಣೆ ಮಾಡುತ್ತಿರುವ ಅನೇಕ ಎಂಡೋ ಸಂತ್ರಸ್ತರಿಗೆ ಮಾಸಾಶನವೂ ಸಿಗುತ್ತಿಲ್ಲ. ಮಾಸಾಶನ ಮೊತ್ತ ಏರಿಕೆಯಾಗಿದ್ದರೂ ಎಂಡೋ ಪೀಡಿತರಿಗೆ ಅದು ಸಿಗುತ್ತಿಲ್ಲ ಎಂಬ ಆರೋಪವಿದೆ ಎಂದು ಹೇಳಿದರು.
ಎಂಡೋಪೀಡಿತರ ಬವಣೆ ಬಗೆಹರಿಸಲು ಪ್ರಯತ್ನಿಸಬೇಕಾಗಿದ್ದ ರಾಜ್ಯ ಸರ್ಕಾರ ಕಣ್ಣು, ಕಿವಿ, ಬಾಯಿ ಮುಚ್ಚಿ ಕುಳಿತಿದೆ. ಮಾತ್ರವಲ್ಲ, ಈ ಬಜೆಟ್ನಲ್ಲೂ ಎಂಡೋ ಸಂತ್ರಸ್ತರಿಗೆ ಸರಕಾರ ಯಾವುದೇ ಪರಿಹಾರ ಕೊಟ್ಟಿಲ್ಲ. ಸರ್ಕಾರವನ್ನು ಎಚ್ಚರಿಸಲು ಎಂಡೋ ಪೀಡಿತರೊಂದಿಗೆ ಇಡೀ ನಾಗರಿಕ ಸಮಾಜ ಒಗ್ಗೂಡಿ ಹೋರಾಡಬೇಕಾಗಿದೆ. ಎಂಡೋ ಸಂತ್ರಸ್ತರಿಗೆ ಪರಿಹಾರ ಸಿಗುವವರೆಗೆ ನನ್ನ ಹೋರಾಟ ನಿಲ್ಲುವುದಿಲ್ಲ. ಸರಕಾರ ಎಂಡೋ ಸಂತ್ರಸ್ತರ ನೋವಿಗೆ ಸ್ಪಂದಿಸಲೇ ಬೇಕು ಎಂದು ಆಗ್ರಹಿಸಿದ್ದಾರೆ.