ಉಡುಪಿ, ಜು 04 : ಕೊರಗ ಸಮುದಾಯದ ಅಭಿವೃದ್ದಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಆದರೆ ಅದನ್ನು ಪಡೆದುಕೊಳ್ಳುವಲ್ಲಿ ಸಮುದಾಯ ಹಿಂದೇಟು ಹಾಕುತ್ತಿದೆ. ಶಿಕ್ಷಣದ ಕೊರತೆ, ಕೀಳಿರಿಮೆ, ಅಂಜಿಕೆಯಿಂದ ಯುವ ಜನತೆ ಕೂಡಾ ಮುಂದೆ ಬರುತ್ತಿಲ್ಲ. ಇದನ್ನು ಗಮನಿಸಿದ ಜಿಲ್ಲಾಡಳಿತ ಕೊರಗ ಸಮುದಾಯಕ್ಕೆ ಮನೋಸ್ಥೈರ್ಯ ನೀಡುವ ನಿಟ್ಟಿನಲ್ಲಿ ಆಯ್ದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರತೀ ವಾರ ಸಭೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಮುಂದಾಗಿದೆ. ಈ ಸಭೆಯಲ್ಲಿ ಗುಂಪು ಚರ್ಚೆ ನಡೆಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.
ಗೋಪಾಡಿ ಗ್ರಾಮ ಪಂಚಾಯತ್, ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆ, ಕೊರಗ ಸಂಘಟನೆ ಉಡುಪಿ ಇವರ ಆಶ್ರಯದಲ್ಲಿ ರೋಶನಿಧಾಮದಲ್ಲಿ ನಡೆದ ಕೊರಗ ಸಮುದಾಯದ ಯುವ ಜನತೆಗೆ ಶೈಕ್ಷಣಿಕ ಹಾಗೂ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕೊರಗ ಸಮುದಾಯದ ವಿದ್ಯಾರ್ಥಿಗಳು 10 ನೇ ತರಗತಿಗೆ ಮುಂಚೆ ಶಾಲೆ ಬಿಡುವುದು ಸರಿಯಲ್ಲ. ಕನಿಷ್ಠ 10 ನೇ ತರಗತಿಯ ತನಕವಾದರೂ ಓದಬೇಕು. ಇವತ್ತು ನಿಮ್ಮಲ್ಲಿಯ ಕೌಶಲ್ಯ ಅಭಿವೃದ್ದಿಗೆ ವಿಫುಲ ಅವಕಾಶಗಳಿವೆ. ಸೂಕ್ತ ತರಬೇತಿಗಳು ಸಿಗುತ್ತಿವೆ. ಆದರೂ ಕೂಡಾ ಸದುಪಯೋಗ ಪಡೆದುಕೊಳ್ಳಲು ಮುಂದೆ ಬಾರದೇ ಇರುವುದು ಸರಿಯಲ್ಲ. ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಧೈರ್ಯ ತುಂಬುವ ಕೆಲಸ ಈ ಗುಂಪು ಚಟುವಟಿಕೆಗಳು ಮಾಡಲಿವೆ. ಪ್ರತೀ ಎರಡು ತಿಂಗಳಿಗೊಮ್ಮೆ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಈ ಸಭೆಯಲ್ಲಿ ಭಾಗವಹಿಸಿ ಬೆಳವಣಿಗೆ ಗಮನಿಸುತ್ತಾರೆ. ಜಗತ್ತು ಇವತ್ತು ಬದಲಾಗುತ್ತಿದೆ. ಉಣ್ಣುವುದು, ಮಲಗುವುದು ಮಾತ್ರ ಬದುಕಲ್ಲ, ಜೀವನದಲ್ಲಿ ಏನಾದರೂ ಸಾಧನೆ, ಸೇವೆ ಮಾಡಬೇಕು ಎಂದರು.
ನಿಮ್ಮ ಸಮುದಾಯದ ಕಲೆ, ಕರಕುಶಲ ಕೌಶಲ್ಯಗಳು ಗೌರವಾರ್ಹವಾದುದು. ಅದನ್ನು ಸದ್ಭಳಕೆ ಮಾಡಿಕೊಳ್ಳಲು ಅವಕಾಶಗಳಿವೆ ಎಂದು ಹೇಳಿದ ಅವರು, ಕೊರಗ ಸಮುದಾಯದ ವಿಚಾರದಲ್ಲಿ ಗೋಪಾಡಿ ಗ್ರಾಮ ಪಂಚಾಯತ್ ವಿಶೇಷ ಆಸಕ್ತಿ ವಹಿಸಿದೆ. ಈ ಸಮುದಾಯವನ್ನು ಬೆಳೆಯಲು ಅವಕಾಶ ಕಲ್ಪಿಸಿರುವ ಈ ಪಂಚಾಯತ್ ಜೊತೆ ಕೆಲಸ ಮಾಡಲು ಸಂತೋಷವಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಪಂ.ಸದಸ್ಯೆ ಶ್ರೀಲತಾ ಸುರೇಶ ಶೆಟ್ಟಿ ಮಾತನಾಡಿ ಕೊರಗ ಸಮುದಾಯದ ಜನ ಬಹಳ ಮುಗ್ದರು. ಇದನ್ನು ದುರುಪಯೋಗ ಮಾಡಿಕೊಳ್ಳುವ ಅಪಾಯವೂ ಇದೆ. ಅಂಜಿಕೆ, ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಡದೆ ಇರುವುದು, ಜಾಗೃತಿಯ ಕೊರತೆಯೂ ಅವರ ಪ್ರಗತಿಯ ಹಿನ್ನೆಡೆಗೆ ಕಾರಣ. ಶಿಕ್ಷಣ ಎಂದಾಗ ಉದ್ಯೋಗ ಎಂದು ಭಾವಿಸಬಾದು. ಶಿಕ್ಷಣದಿಂದ ಮಾತ್ರ ವ್ಯಕ್ತಿತ್ವ ತಳಮಟ್ಟದಿಂದ ಬದಲಾವಣೆ ಆಗುತ್ತದೆ, ಬದುಕು ರೂಪಿಸುತ್ತದೆ. ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಡಿ, ಮನೆಯಲ್ಲಿ ಕಲಿಕಾ ಪೂರಕ ವಾತಾವರಣ ನಿರ್ಮಾಣ ಮಾಡಿಕೊಡಿ ಎಂದರು.
ಗ್ರಾ.ಪಂ.ಅಧ್ಯಕ್ಷೆ ಸರಸ್ವತಿ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ,ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಸಿ, ತಾ.ಪಂ.ಸದಸ್ಯೆ ವೈಲೆಟ್ ಬರೆಟ್ಟೋ, ಗ್ರಾ.ಪಂ.ಉಪಾಧ್ಯಕ್ಷೆ ಕಲ್ಪನಾ ಭಾಸ್ಕರ, ಕೊರಗ ಸಂಘಟನೆ ಅಧ್ಯಕ್ಷ ಗಣೇಶ, ಗ್ರಾ.ಪಂ.ಸದಸ್ಯೆ ಬಬಿತಾ, ಸಂಪನ್ಮೂಲ ವ್ಯಕ್ತಿ ನರೇಂದ್ರ ಕುಮಾರ್ ಕೋಟ, ಸಮಗ್ರ ಗಿರಿಜನ ಯೋಜನೆಯ ಇಲಾಖಾ ಅಧಿಕಾರಿ ಉಪಸ್ಥಿತರಿದ್ದರು.
ಪ್ರಸಿಲ್ಲಾ ಪ್ರಾರ್ಥಿಸಿ, ಸರಸ್ವತಿ ಪುತ್ರನ್ ಸ್ವಾಗತಿಸಿ, ಕೊರಗ ಸಂಘಟನೆಯ ಗಣೇಶ ಬಾರಕೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಗಣೇಶ ಕಾರ್ಯಕ್ರಮ ನಿರ್ವಹಿಸಿದರು.