ಕಾಸರಗೋಡು, ಜು 04 : ತನ್ನ ಪತಿ ಜೊತೆ ಮಲಗಿದ್ದ ಸವತಿ ಪತ್ನಿಯನ್ನು ಪೆಟ್ರೋಲ್ ಸುರಿದು ಕೊಲೆಗೈದ ಮೊದಲ ಪತ್ನಿಗೆ ಜೀವಾವಧಿ ಸಜೆ ಮತ್ತು 50 ಸಾವಿರ ರೂ ದಂಡ ವಿಧಿಸಿ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜು .03ರ ಮಂಗಳವಾರ ತೀರ್ಪು ನೀಡಿದೆ.
ಉಪ್ಪಳ ಹಿದಾಯತ್ ನಗರ ಕನ್ನಂಬಟ್ಟಿಯ ಅಬ್ದುಲ್ ರಹಮಾನ್ ರ ಎರಡನೇ ಪತ್ನಿ ನಫೀಸತ್ ಮಿಸ್ರಿಯಾ ( 21) ಳ ಕೊಲೆಗೆ ಸಂಬಂಧಪಟ್ಟಂತೆ ಮೊದಲ ಪತ್ನಿ , ಗೋವಾ ನಿವಾಸಿ ಮಿಸ್ರಿಯಾ (27) ಳಿಗೆ ಜೀವಾವಧಿ ಸಜೆ ಮತ್ತು ದಂಡ ವಿಧಿಸಲಾಗಿದೆ.
2011 ರ ಆಗಸ್ಟ್ 7 ರಂದು ಮುಂಜಾನೆ ಆರು ಗಂಟೆಗೆ ಈ ಘಟನೆ ನಡೆದಿತ್ತು. ಕಿಟಕಿ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು , ಅಬ್ದುಲ್ ರಹಮಾನ್ ಮತ್ತು ಮಿಸ್ರಿಯಾ ಗಂಭೀರವಾಗಿ ಸುಟ್ಟು ಗಾಯಗೊಂಡಿದ್ದರು. ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ಮಿಸ್ರಿಯ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು . ಅಬ್ದುಲ್ ರಹಮಾನ್ ಹಲವು ಸಮಯ ಚಿಕಿತ್ಸೆ ಪಡೆದಿದ್ದರು . ಕೊಲೆಗೀಡಾದ ನಫೀಸತ್ ಮಿಸ್ರಿಯಾ ಏಳು ತಿಂಗಳ ಗರ್ಭಿಣಿ ಯಾಗಿದ್ದಳು .
ಮಿಸ್ರಿಯಾ ಅಬ್ದುಲ್ ರಹಮಾನ್ ರ ಮೊದಲ ಪತ್ನಿಯಾಗಿದ್ದು ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಅಬ್ದುಲ್ ರಹಮಾನ್ ರು ಮಿಸ್ರಿಯಾ ಳನ್ನು ತೊರೆದು ಉಪ್ಪಳ ಹಿದಾಯತ್ ನಗರದ ನಫೀಸತ್ ಮಿಸ್ರಿಯಾ ರನ್ನು ವಿವಾಹವಾಗಿದ್ದರು.
ಇದರಿಂದ ದ್ವೇಷ ಸಾಧಿಸಿದ್ದ ಮಿಸ್ರಿಯಾ ಳು ಪತಿ ಅಬ್ದುಲ್ ರಹಮಾನ್ ಮತ್ತು ನಫೀಸತ್ ಮಿಸ್ರಿಯಾಳ ಕೊಲೆಗೆ ಸಂಚು ನಡೆಸಿದ್ದರು.
ಕುಂಬಳೆ ಸರ್ಕಲ್ ಇನ್ಸ್ ಪೆಕ್ಟರ್ ರಾಗಿದ್ದ ಯು. ಪ್ರೇಮನ್ ಆರೋಪಿಯನ್ನು ಬಂಧಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ 34 ಮಂದಿಯನ್ನು ಸಾಕ್ಷಿಯಾಗಿ ವಿಸ್ತರಿಸಲಾಗಿತ್ತು. ಪ್ರಾಸಿಕ್ಯೂಷನ್ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ . ರಾಘವನ್ ಹಾಜರಾಗಿದ್ದರು. ದಂಡ ಪಾವತಿಸದಿದ್ದಲ್ಲಿ ಆರೋಪಿ ಮೂರು ವರ್ಷ ಹೆಚ್ಚುವರಿಯಾಗಿ ಸಜೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದೆ.