ಉಡುಪಿ, ಜು 04: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜಿ ಸನ್ಯಾಸ ನಿಯಮ ಪಾಲನೆ ಮಾಡುತ್ತಿಲ್ಲ ಎಂಬ ವಿವಾದ ಈಗ ಹೊಸ ಬೆಳವಣಿಗೆಗೆ ಕಾರಣವಾಗಿದೆ. ಶಿರೂರು ಮಠದ ಪಟ್ಟದ ದೇವರಾದ ವಿಠಲ ಪ್ರಸಕ್ತ ಶ್ರೀ ಕೃಷ್ಣ ಮಠದಲ್ಲಿ ಪೂಜೆಗೊಳ್ಳುತ್ತಿದ್ದು, ಶಿರೂರು ಶ್ರೀಗಳು ಉತ್ತಾರಧಿಕಾರಿಯನ್ನು ನೇಮಿಸಿದರೆ ಮಾತ್ರ ಹಸ್ತಾಂತರಿಸಲು ಸಪ್ತ ಮಠಾಧೀಶರು ಧೃಡ ನಿರ್ಧಾರ ತಳೆದಿದ್ದಾರೆ.
ಶಿರೂರು ಶ್ರೀಗಳ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ , ಹೇಳಿಕೆಯ ಹಿನ್ನಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ. ಶ್ರೀಗಳು ಚುನಾವಣೆಗೆ ನಾಮಪತ್ರ ಸಲ್ಲಿಕೆಯ ದಿನ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಪಟ್ಟದ ದೇವರಿಗೆ ನಿತ್ಯ ಪೂಜೆ ನಡೆಯಬೇಕಾದ ಕಾರಣ ಅದಮಾರು ಶ್ರೀಗಳ ಮೂಲಕ ಮೂರ್ತಿಯನ್ನು ಕೃಷ್ಣ ಮಠಕ್ಕೆ ಕಳುಹಿಸಲಾಗಿತ್ತು. ಬಳಿಕ ಎರಡು ತಿಂಗಳಿಂದ ಅಲ್ಲೇ ಪೂಜೆ ನಡೆಯುತ್ತಿದೆ. ಈ ನಡುವೆ ಶ್ರೀಗಳ ಕುರಿತು ವಿವಾದದ ಹಿನ್ನಲೆಯಲ್ಲಿ ಪಟ್ಟದ ದೇವರನ್ನು ವಾಪಾಸ್ ನೀಡದಿರಲು ಉಳಿದ ಮಠಾಧೀಶರು ನಿರ್ಧರಿಸಿದ್ದರು.
ಬಳಿಕ ನಡೆದ ಕೆಲವು ಬೆಳವಣಿಗೆಯ ನಂತರ ಜೂ 23 ರಂದು ಏಕಾದಶಿ ಆಚರಣೆ ತಮ್ಮ ಮಠದಲ್ಲೇ ನಡೆಯಬೇಕೆಂದು ಶಿರೂರು ಶ್ರೀಗಳು ಪಟ್ಟದ ದೇವರನ್ನು ವಾಪಾಸ್ ಕೊಡಿ ಎಂದು ಕೃಷ್ಣ ಮಠದಲ್ಲಿ ಕೇಳಿದ್ದಾರೆ. ಆದರೆ ಉಳಿದ ಮಠಾದೀಶರ ತೀರ್ಮಾನದಂತೆ ದೇವರನ್ನು ಹಸ್ತಾಂತರಿಸಲು ನಿರಾಕರಿಸಿದ್ದಾರೆ. ಪರಿಣಾಮ ಶಿರೂರು ಶ್ರೀ ಇದರಿಂದ ಅಸಮಾಧಾನಗೊಂಡಿದ್ದರು.
ನಂತರ ಜೂ 24 ರಂದು ಮಠದಲ್ಲಿ ಸಭೆ ನಡೆಸಲಾಗಿದ್ದು, ಇದರಲ್ಲಿ ಅಷ್ಟಮಠಾಧೀಶರು. ಶಾಸಕ ರಘುಪತಿ ಭಟ್ ಕೂಡಾ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ತಾನು ಮಾಧ್ಯಮಗಳಿಗೆ ಯಾವುದೇ ರೀತಿಯ ವಿವಾದಿತ ನೀಡಿಕೆ ಹೇಳಿಲ್ಲ ಎಂದು ಸಮರ್ಥಿಸಿಕೊಂಡರೂ ಅದು ಉಳಿದವರಿಗೆ ಸಮಾಧಾನವಾಗಿರಲಿಲ್ಲ. ಮಧ್ವಚಾರ್ಯರು ನೀಡಿದ ಮೂರ್ತಿಯ ಘನತೆಗೆ ಕುಂದುಂಟಾಗದಂತೆ ಪೂಜಿಸುತ್ತೇವೆ. ಆಚರಣೆ ಪಾಲಿಸದ ನೀವು ಪೀಠದಲ್ಲಿ ಮುಂದುವರಿಯಬಾರದು ಎಂದು ಉಳಿದ ಮಠಾಧೀಶರು ಸಹಿ ಹಾಕಿ ಪತ್ರ ನೀಡಿದ್ದಾರೆ ಎನ್ನಲಾಗಿದೆ
ವಿವಾದ ಬಳಿಕ ಶಿರೂರು ಶ್ರೀಗಳು ಉಡುಪಿ ನಗರ ಠಾಣೆಗೆ ದೂರು ನೀಡಿದ್ದು, ಮಠದ ಪಟ್ಟದ ದೇವರನ್ನು ಪಡೆಯಲು ಸಹಕರಿಸುವಂತೆ ಕೋರಿದ್ದರು. ಆದರೆ ಪೊಲೀಸರು ಧಾರ್ಮಿಕ ವಿಚಾರದಲ್ಲಿ ಮಧ್ಯ ಪ್ರವೇಶಿಸುವ ಸಾಧ್ಯತೆ ಕಡಿಮೆ ಇರುವ ಕಾರಣ ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.