ಕಾರ್ಕಳ, ಸೆ: ’ಮೊದಲ ಮಂಗಳಯಾನ ಯತ್ನದಲ್ಲೇ ಯಶಸ್ಸುಗಳಿಸಿದ ಏಕೈಕ ದೇಶ ಭಾರತ ಎನ್ನುವುದು ನಮಗೆ ಹೆಮ್ಮೆಯ ವಿಚಾರ. ವಿಜ್ಞಾನ ಹಾಗೂ ತಂತ್ರಜ್ಞಾನದಿಂದ ಅನ್ಯಗ್ರಹಗಳಲ್ಲಿನ ಅತ್ಯಂತ ವಿಸ್ಮಯಕಾರಿ ವಿಚಾರಗಳನ್ನು ನಾವು ತಿಳಿದುಕೊಳ್ಳಬುದಾಗಿದೆ. ದೇಶದ ಪ್ರಗತಿಗೆ ಬೇಕಾದ ತಂತ್ರಜ್ಞಾನದ ಬೆಳವಣಿಗೆಯ ಬಗೆಗೆ ವಿದ್ಯಾರ್ಥಿಗಳು ಆಸಕ್ತಿಯನ್ನು ತೋರುವುದು ಅಗತ್ಯ" ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ ಸಾರ್ವಜನಿಕ ಸಂಪರ್ಕ ಕಾರ್ಯನಿರ್ವಾಹಕ ಅಧಿಕಾರಿ ಗುರುಪ್ರಸಾದ್ ಅಭಿಪ್ರಾಯಪಟ್ಟರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರವು ವಿದ್ಯಾಸಂಸ್ಥೆಗಳೊಂದಿಗೆ ಒಡಗೂಡಿ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶದ ಬಗೆಗಿನ ಆಸಕ್ತಿಯನ್ನು ಚುರುಕುಗೊಳಿಸಿ ಹೊಸ ಆವಿಷ್ಕಾರಕ್ಕೆ ಪ್ರೋತ್ಸಾಹಿಸುವ ವೇದಿಕೆ ನಿರ್ಮಿಸುವ ನಿಟ್ಟಿನಲ್ಲಿ ಈ ಬಾರಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಸಹಯೋಗದೊಂದಿಗೆ ಸೆ.೨೭ ಹಾಗೂ ೨೮ ರಂದು ಹಮ್ಮಿಕೊಂಡ ಎರಡು ದಿನಗಳ ’ಬಾಹ್ಯಾಕಾಶ ವಸ್ತುಪ್ರದರ್ಶನ’ ಹಾಗೂ ವಿಚಾರಗೋಷ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. "ಭಾರತೀಯ ಬಾಹ್ಯಾಕಾಶ ಸಂಶೋಧನಾ ಪಿತಾಮಹ ಡಾ.ವಿಕ್ರಮ್ ಸಾರಾಭಾಯಿ ಅವರ ಚಿಂತನಾದೃಷ್ಟಿಯನ್ನು ಅನುಸರಿಸಿ ಇಂದು ಇಸ್ರೋ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಸಂಶೋಧನಾ ಕ್ಷೇತ್ರದಲ್ಲಿ ಸಫಲತೆ ಹಾಗೂ ವಿಫಲತೆಯ ಸಂಭವನೀಯತೆಯು ಸಮಾನವಾಗಿರುತ್ತದೆ. ಸಫಲತೆಯನ್ನು ಕಾಯ್ದುಕೊಂಡು ತಂತ್ರಜ್ಞಾನದಲ್ಲಿ ನಿರಂತರ ಪ್ರಗತಿಯನ್ನು ಕಾಣುತ್ತಿರಬೇಕು. ವಿದ್ಯಾರ್ಥಿಗಳಿಗೆ ಖಗೋಳ ಜ್ಞಾನವನ್ನು ಪರಿಚಯಿಸಿ ಹೆಚ್ಚಿನ ಚಿಂತನೆಯ ಕಿಚ್ಚನ್ನು ಹತ್ತಿಸಲು ಶ್ರಮವಹಿಸಿದ ನಿಟ್ಟೆ ಸಂಸ್ಥೆಯ ಸಹಕಾರ ಅವಿಸ್ಮರಣೀಯ" ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ "ಬಾಹ್ಯಾಕಾಶ ಹಾಗೂ ಖಗೋಳ ವಿಜ್ಞಾನದ ಬಗೆಗೆ ಕಿಂಚಿತ್ ಆಸಕ್ತಿ ಇರುವ ವಿದ್ಯಾರ್ಥಿಗಳೂ ಕೂಡ ಆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಬಗೆಗೆ ಈಗಿನಿಂದಲೇ ಚಿಂತಿಸಬೇಕಿದೆ. ಪ್ರೌಢಶಾಲೆಗಳ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಒಂದೇ ತಮ್ಮ ಕ್ಷೇತ್ರವೆಂದುಕೊಳ್ಳದೆ ಬಾಹ್ಯಾಕಾಶ ವಿಚಾರದಲ್ಲಿ ಉನ್ನತಶಿಕ್ಷಣವನ್ನು ಪಡೆದು ಇಂತಹ ಆಸಕ್ತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಿದೆ. ಇದರಿಂದ ಸ್ವಕೀರ್ತಿಯೊಂದಿಗೆ ದೇಶದ ಕೀರ್ತಿಯನ್ನೂ ಹೆಚ್ಚಿಸಿದಂತಾಗುತ್ತದೆ. ಇಂದು ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗವು ಇಸ್ರೋ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ವಸ್ತುಪ್ರದರ್ಶನ ಕಾರ್ಯಕ್ರಮದ ಪೂರ್ಣಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು" ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ.ಐ.ಆರ್ ಮಿತ್ತಂತಾಯ, ಡಾ.ಶ್ರೀನಿವಾಸ ರಾವ್ ಬಿ.ಆರ್, ರಿಜಿಸ್ಟ್ರಾರ್ ಪೊ.ಯೋಗೀಶ್ ಹೆಗ್ಡೆ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ಪ್ರಧ್ಯಾಪಕರು ಉಪಸ್ಥಿತರಿದ್ದರು