ಉಡುಪಿ,ಜು 03: ಉದ್ಯಮಿ ಭಾಸ್ಕರ್ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.2 ರ ಸೋಮವಾರ ಉಡುಪಿ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಸಾಕ್ಷಿಗಳ ವಿಚಾರಣೆ ನಡೆಯಿತು. ಪ್ರಕರಣದ ಪ್ರಮುಖ ಸಾಕ್ಷಿ ಹಾಗೂ ದೂರುದಾರರಾದ ಮೃತ ಭಾಸ್ಕರ್ ಶೆಟ್ಟಿಯ ತಾಯಿ ಗುಲಾಬಿ ಶೆಡ್ತಿ ಪ್ರಕರಣಕ್ಕೆ ಸಂಬಂದಪಟ್ಟಂತೆ ಸಾಕ್ಷಿ ನುಡಿದರು. ಇವರ ಹೇಳಿಕೆಯನ್ನು ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಪಡೆದುಕೊಂಡರು. ಈ ಪ್ರಕರಣದ ವಿಚಾರಣೆ ಇಂದೂ ಕೂಡಾ (ಜು.3ರಂದು) ಮುಂದುವರೆಯಲಿದ್ದು, ಆರೋಪಿ ಪರ ವಕೀಲ ಮೈಸೂರಿನ ಅಶ್ವಿನಿ ಕುಮಾರ್ ಜೋಶಿ ಇವರನ್ನು ಪಾಟಿ ಸವಾಲಿಗೆ ಒಳಪಡಿಸಲಿದ್ದಾರೆ. ಶಾಂತಿ ಬಾಯಿ ಜು.3ರಂದು ಪ್ರಕರಣದ ಮೊದಲ ತನಿಖಾಧಿಕಾರಿಯಾಗಿದ್ದ ಆಗಿನ ಮಣಿಪಾಲ ಪೊಲೀಸ್ ನಿರೀಕ್ಷಕ ಎಸ್.ವಿ.ಗಿರೀಶ್ ಅವರಿಂದ ಸಾಕ್ಷಿ ಹೇಳಿಕೆ ಪಡೆದುಕೊಳ್ಳಲಿದ್ದಾರೆ.
ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯದ ಕಾನ್ಫೆರೆನ್ಸ್ ಹಾಲ್ನಲ್ಲಿ ಸ್ಥಳ ಕೊರತೆಯ ಹಿನ್ನೆಲೆಯಲ್ಲಿ ತೆರೆದ ನ್ಯಾಯಾಲಯದಲ್ಲಿಯೇ ನಡೆಸಲಾಯಿತು. ಅಲ್ಲಿಯೇ ಪ್ರೊಜೆಕ್ಟರ್ಗಳನ್ನು ಅಳವಡಿಸಿ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳಾದ ಭಾಸ್ಕರ್ ಶೆಟ್ಟಿಯ ಪತ್ನಿ ರಾಜೇಶ್ವರಿ ಶೆಟ್ಟಿ(50), ಮಗ ನವನೀತ್ ಶೆಟ್ಟಿ(20) ಹಾಗೂ ನಂದಳಿಕೆಯ ನಿರಂಜನ್ ಭಟ್(26) ಅವರೊಂದಿಗೆ ವೀಡಿಯೊ ಕಾನ್ಫೆರೆನ್ಸ್ ಮೂಲಕ ವಿಚಾರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಜಾಮೀನಿನಲ್ಲಿ ಬಿಡುಗಡೆ ಗೊಂಡಿರುವ ಸಾಕ್ಷನಾಶ ಆರೋಪಿಗಳಾದ ನಿರಂಜನ್ ಭಟ್ ಅವರ ತಂದೆ ಶ್ರೀನಿವಾಸ ಭಟ್(56) ಹಾಗೂ ಕಾರು ಚಾಲಕ ರಾಘವೇಂದ್ರ(26) ವಿಚಾರಣೆ ವೇಳೆ ಹಾಜರಿದ್ದರು.
ಪ್ರಕರಣದ ಒಟ್ಟು 167 ಸಾಕ್ಷಿಗಳ ಪೈಕಿ 44 ಮಂದಿ ಸಾಕ್ಷಿಗಳ ವಿಚಾರಣೆಯು ಜು.6ರವರೆಗೆ ಹಾಗೂ ಜು.16ರಿಂದ 19ರವರೆಗೆ ನಡೆಯಲಿದೆ. ಜುಲೈ 28, 2016ರಲ್ಲಿ ಉದ್ಯಮಿ ಭಾಸ್ಕರ್ ಶೆಟ್ಟಿ ಅವರ ಕೊಲೆಯಾಗಿತ್ತು. ಈ ಪ್ರಕರಣ ರಾಜ್ಯಾದ್ಯಂತ ಸಂಚಲನ ಉಂಟುಮಾಡಿತ್ತು. ಪ್ರಕರಣದಲ್ಲಿ ಭಾಸ್ಕರ್ ಶೆಟ್ಟಿ ಅವರ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಹಾಗೂ ನಂದಳಿಕೆಯ ನಿರಂಜನ್ ಸೇರಿದಂತೆ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಆರೋಪಿಗಳಿಗೆ ಹೈಕೋರ್ಟ್ನಲ್ಲಿ ಜಾಮೀನು ದೊರೆಯದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೊರೆಹೋಗಿದ್ದರು. ರಾಜೇಶ್ವರಿ ಶೆಟ್ಟಿ ಅವರ ವಿರುದ್ಧ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿರುವುದರಿಂದ, ಸಾಕ್ಷಿಗಳ ಹಾಗೂ ಆರೋಪಿಗಳ ವಿಚಾರಣೆ ಆರಂಭಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಸೋಮವಾರದಿಂದ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿದೆ.