ಮಂಗಳೂರು, ಜು 03: ಮಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆ ಒಂದೇ ವರ್ಷದಲ್ಲಿ 21 , ಆನ್ ಲೈನ್ ವಂಚನೆ ಕೇಸುಗಳನ್ನು ದಾಖಲಿಸಿಕೊಂಡಿದೆ. ಈ ವಂಚನೆಯಿಂದ ಸುಮಾರು 1.4 ಕೋಟಿ ರೂಪಾಯಿ ಹೆಚ್ಚು ಮಂಗಳೂರಿಗರು ಕಳೆದುಕೊಂಡಿದ್ದಾರೆ. ಆನ್ ಲೈನ್ ವಂಚನೆಗೆ ಭಾರೀ ಮೊತ್ತದ ಹಣ ಕಳೆದುಕೊಳ್ಳುವವರಲ್ಲಿ ಮಹಿಳೆಯರು ಮತ್ತು ಯುವಜನತೆ ಹೆಚ್ಚಾಗಿದ್ದಾರೆ.
ಕರೆನ್ಸಿಗೆ ಪ್ರತಿಯಾಗಿ ಡಾಲರ್, ಪೌಂಡ್, ಕಾರು ನೀಡುವುದಾಗಿ , ಅಥವಾ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ವಂಚಿಸುವವರ ದೊಡ್ಡ ಜಾಲವೇ ಇದೆ ಎನ್ನಲಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಆನ್ ಲೈನ್ ವಂಚನೆಗೊಳಗಾದವರು ಮಾಹಿತಿ ಮತ್ತು ಹಣವನ್ನು ಪ್ರಜ್ಞಾಪೂರ್ವಕವಾಗಿಯೇ ಕಳೆದುಕೊಂಡವರಾಗಿದ್ದಾರೆ.ಇನ್ನು ಕೆಲವರು ವಂಚನೆಗಾರರಿಗೆ ಹಣ ನೀಡಲೆಂದೇ ಇಲ್ಲ ಸಲ್ಲದಂತೆ ಸಾಲ ಮಾಡಿಕೊಂಡವರೂ ಇದ್ದಾರೆ ಎನ್ನುವುದು ಆಶ್ಚರ್ಯ . ಇನ್ನು ಈ ರೀತಿ ಆನ್ ಲೈನ್ ವಂಚನೆಗೊಳಗಾದವರಿಗೆ ಹಣ ವರ್ಗಾವಣೆ ಮಾಡಿ ಎರಡು ತಿಂಗಳ ಬಳಿಕವಷ್ಟೇ ತಾವು ಮೋಸ ಹೋಗಿದ್ದೇವೆ ಎಂದು ಅರ್ಥವಾಗುವುದು. ವಂಚನೆ ಎಸಗುವವರು ವಿದೇಶಿಯರು ಎಂದು ಹೇಳಿಕೊಂಡು ಇಮೇಲ್, ಸಾಮಾಜಿಕ ಮಾಧ್ಯಮ ಮತ್ತು ಇತರ ಸಂದೇಶಗಳ ಮೂಲಕ ತಮ್ಮ ಅನುಕಂಪದ ಕಥೆಯನ್ನು ಭಾವನಾತ್ಮಕ ಮಾತುಗಳ ಮೂಲಕ ಹೇಳಿ ಹಣ ವಂಚಿಸುತ್ತಾರೆ. ಅಥವಾ ತಾವೇ ಹಣ ಕಳುಹಿಸುವುದಾಗಿ ಹೇಳಿ ಬಳಿಕ ಸುಂಕ ಅಧಿಕಾರಿಗಳು ಬಿಡುವುದಿಲ್ಲ ಸುಂಕ ಕಟ್ಟಿ ಎಂದು ಹಣ ವಂಚಿಸುತ್ತಾರೆ. ಇದಕ್ಕೆಲ್ಲಾ ಮೂಲ ನೈಜೀರಿಯಾ ವಂಚನೆಯಾಗಿದೆ.