ಮಂಗಳೂರು, ಜು 03 : ತಪ್ಪು ಇದ್ದೋ ಅಥವಾ ಇಲ್ಲದೆಯೋ ಕಾರಾಗೃಹದೊಳಗೆ ಬಂದಿಯಾದ ವಿಚಾರಾಣಾಧೀನ ಖೈದಿಗಳ ಪುಟ್ಟ ಮಕ್ಕಳಿಗೆ ಬಾಹ್ಯ ಪ್ರಪಂಚದ ಅರಿವು ಇರದು..ಕಾರಣ ಆ ಕಂದಮ್ಮಗಳಿಗೆ ತಾಯಿಯ ಮಡಿಲೇ ಸ್ವರ್ಗ. ಕಾರಾಗೃಹದ ಕತ್ತಲ ಕೋಣೆಯಲ್ಲಿ ಪುಟ್ಟ ಮಕ್ಕಳ ಬದುಕು ಚಿಗುರೆಡೆಯಲಾರಂಭಿಸುತ್ತದೆ. ಇವೆಲ್ಲವನ್ನೂ ಮೀರಿ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಹೊಸತನದ ಗಾಳಿ ಬೀಸತೊಡಗಿದೆ.
ವಿಚಾರಣಾಧೀನ ಖೈದಿಗಳ ಮೂವರು ಮಕ್ಕಳಿಗೆ ಇಂದಿನಿಂದ ಅಕ್ಷರಗಳ ಅಭ್ಯಾಸಿಸುವ ಅವಕಾಶ ಒದಗಿದೆ. ಜೈಲಿಗೆ ಹತ್ತಿರವಿರುವ ಅಂಗನವಾಡಿ ಕೇಂದ್ರವೊಂದರ ಶಿಕ್ಷಕಿಯೊಬ್ಬರು ಜೈಲಿಗೇ ಆಗಮಿಸಿ ಈ ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ. ಆ ಮೂಲಕ, ಜೈಲಿನಲ್ಲಿರುವ ವಿಚಾರಣಾಧೀನ ಖೈದಿಗಳ ಮಕ್ಕಳು ವಿದ್ಯೆಯ ದೀಪ ಹಿಡಿಯಲು ತಯಾರಾಗಿದ್ದಾರೆ. ಯಾವುದೋ ಪ್ರಕರಣಗಳಿಗೆ ಸಂಬಂಧಿಸಿದಂತೆ ಜೈಲು ಸೇರಿದವರ ಪೈಕಿ ಇಲ್ಲಿ 9 ಮಂದಿ ಮಹಿಳಾ ವಿಚಾರಣಾಧೀನ ಕೈದಿಗಳಿ ದ್ದಾರೆ. ಆ ಪೈಕಿ ಮೂವರು ತಮ್ಮ ಮಕ್ಕಳನ್ನು ತಮ್ಮ ಜತೆಯೇ ಇರಿಸಿಕೊಂಡಿದ್ದಾರೆ.
ಜೈಲಿನಲ್ಲಿ ಹೆತ್ತವರೊಂದಿಗಿರುವ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಈ ಮಕ್ಕಳಿಗೆ ಕಲಿಯುವ ಯೋಗ ದೊರಕಿದೆ. ಮಂಗಳೂರಿನಲ್ಲಿ ಮೊದಲ ಬಾರಿಗೆ ಶಿಕ್ಷಕರೇ ಜೈಲಿಗೆ ತೆರಳಿ ಪಾಠ ಹೇಳಿ ಕೊಡುತ್ತಿರುವಂಥದ್ದು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮುಖಾಂತರ ಸನಿಹದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಇಂದಿನಿಂದ ಪ್ರತಿ ದಿನ ತೆರಳಿ ಒಂದು ಗಂಟೆ ಪಾಠ ಬೋದನೆ ಮಾಡಲಿದ್ದಾರೆ.