ಜು, 02 :ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,578 ಕೋಟಿ ರೂ. ವಂಚಿಸಿ ದೇಶದಿಂದ ಪಲಾಯನ ಮಾಡಿರುವ ವಜ್ರಾಭರಣ ಉದ್ಯಮಿ ನೀರವ್ ಮೋದಿ ಹಾಗೂ ಸಹೋದರ ನಿಶಾಲ್ ಮೋದಿ, ನೌಕರ ಸುಭಾಷ್ ಪರಬ್ ವಿರುಧ್ದ ರೆಡ್ ಕಾರ್ನರ್ ನೋಟೀಸ್ ಜಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಟರ್ನ್ಯಾಷನಲ್ ಕ್ರಿಮಿನಲ್ ಪೊಲೀಸ್ ಆರ್ಗನೈಸೇಶನ್ (ಇಂಟರ್ಪೋಲ್) ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಿದ್ದು, ಇದರ ಪರಿಣಾಮ ನೀರವ್ ಮೋದಿ ಮತ್ತು ಆತನ ಸಂಗಡಿಗರಿಗೆ ಅಂತಾರಾಷ್ಟ್ರೀಯ ಗಡಿಗಳನ್ನು ದಾಟಿ ಪ್ರಯಾಣಿಸುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ಇದು ಅವರ ಬಂಧನವನ್ನು ಸುಲಭ ಸಾಧ್ಯ ಮಾಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯ ನೀರವ್ ಮೋದಿಗೆ ಸಮನ್ಸ್ ನೀಡಿದ ಬಳಿಕ ಸದ್ಯ ಇಂಟರ್ಪೋಲ್ ಅಧಿಕಾರಿಗಳು ಕೂಡ ಅಖಾಡಕ್ಕೆ ಇಳಿದಿದ್ದು, ನೀರವ್ ಮೋದಿಯವರಿಗೆ ನೊಟೀಸ್ ನೀಡಿದ್ದಾರೆ. ನೀರವ್ ಮೋದಿಯವರನ್ನು ವಶಕ್ಕೆ ಪಡೆದುಕೊಳ್ಳಿ ಅಥವಾ ಬಂಧಿಸಿ ಎಂದು ಇಂಟರ್ಪೋಲ್ ಅಧಿಕಾರಿಗಳು ಸದಸ್ಯ ರಾಷ್ಟ್ರಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೀರವ್ ಮೋದಿ ವಿರುದ್ದ ರೆಡ್ ಕಾರ್ನರ್ ನೋಟಿಸ್ ನೀಡುವಂತೆ ಸಿಬಿಐ ಇಂಟರ್ ಪೋಲ್ ಗೆ ಪತ್ರ ಬರೆದಿತ್ತು. ಇದರಿಂದಾಗಿ ಇಂಟರ್ ಪೋಲ್ ತನ್ನ 192 ಸದಸ್ಯ ರಾಷ್ಟ್ರಗಳಿಗೆ ನೀರವ್ ಮೋದಿ ಹಾಗೂ ಸಂಗಡಿಗರು ತಮ್ಮ ದೇಶದಲ್ಲಿ ತಲೆಮರೆಸಿಕೊಂಡಿದ್ದಲ್ಲಿ ಅವರನ್ನು ಪತ್ತೆ ಹಚ್ಚಿ, ಗುರುತಿಸಿ ಬಂಧಿಸುವಂತೆ ಸೂಚಿಸಲಿದೆ. ಬಳಿಕ ಆ ದೇಶದಿಂದ ಆರೋಪಿಗಳನ್ನು ಭಾರತಕ್ಕೆ ಗಡೀಪಾರು ಮಾಡುವ ಕಾನೂನು ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.