ಮಂಗಳೂರು, ಸೆ27: ದಸರಾ ರಜೆ ಇದೆ, ಮಜಾ ಮಾಡಲೆಂದು ಸಮುದ್ರದ ಅಲೆಗಳೊಂದಿಗೆ ಆಡೋಣ ಎಂದು ಪ್ರವಾಸಿಗಳು ಸಮುದ್ರದ ತೀರಗಳಿಗೆ ಹೋದರೆ ವೈದ್ಯರ ಬಳಿ ಹೋಗುವ ಸ್ಥಿತಿ ಬಂದೊದಗಬಹುದು. ಕಾರಣ ಎರಡು ದಿನದಿಂದ ಮಲ್ಪೆ ಬೀಚ್ನಲ್ಲಿ ನೀರಿಗಿಳಿಯುವ ಪ್ರವಾಸಿಗರಿಗೆ ತೊರಕೆ ಮೀನು (ಸ್ಟಿಂಗ್ರೇ) ಇಂಜೆಕ್ಷನ್ ರುಚಿ ತೋರಿಸುತ್ತಿದೆ. ಸಣ್ಣ ಗಾತ್ರದ ತೊರಕೆ ಮೀನು ತನ್ನ ಬಾಲದ ಮುಳ್ಳಿನಿಂದ ಚುಚ್ಚುತ್ತಿದ್ದು ಮಂಗಳವಾರ 8 ಮಂದಿ ಪ್ರವಾಸಿಗರು ಗಾಯಗೊಂಡಿದ್ದಾರೆ. ಅವರೆಲ್ಲ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಎರಡು ವರ್ಷದ ಹಿಂದೆಯೂ ಕೂಡ ಇದೇ ರೀತಿ ಇಲ್ಲಿ ತೊರಕೆ ಮೀನುಗಳು ಪ್ರವಾಸಿಗರನ್ನು ಚುಚ್ಚಿ ಗಾಯಗೊಳಿಸಿದ ಬಗ್ಗೆಯೂ ವರದಿಯಾಗಿತ್ತು. ಸಾಮಾನ್ಯವಾಗಿ ಆಳಸಮುದ್ರದಲ್ಲಿ ಕಂಡುಬರುವ ಈ ಮೀನುಗಳು ಈ ಅವಧಿಯಲ್ಲಿ ಮರಿ ಇಡಲು ತಣ್ಣನೆ ನೀರನ್ನು ಅರಸಿಕೊಂಡು ತೀರಕ್ಕೆ ಬರುತ್ತವೆ. ಅದರಂತೆ ಈ ವರ್ಷವೂ ಸಾಕಷ್ಟು ಸಂಖ್ಯೆಯಲ್ಲಿ ಮೀನುಗಳು ತೀರ ಸೇರಿವೆ. ಇನ್ನೂ ಒಂದು ವಾರದ ವರೆಗೆ ತೀರದಲ್ಲಿ ಇರುತ್ತವೆ ಎನ್ನಲಾಗಿದೆ.ಅದ್ದರಿಂದ ಸಮುದ್ರಕ್ಕೆ ಇಳಿಯುವ ಪ್ರವಾಸಿಗರು ಸ್ವಲ್ಪ ಎಚ್ಚರಿಕೆ ವಹಿಸೋದು ಒಳ್ಳೆಯದು.