ಜು 02 : ಬಸ್ನಲ್ಲಿ ಪ್ರಯಾಣಿಕರು ಟಿಕೆಟ್ ಖರೀದಿಸಿ ಸಂಚರಿಸುವುದು ಸಾಮಾನ್ಯ.. ಆದರೆ ಒಂದು ವೇಳೆ ಪ್ರಯಾಣಿಗನ ಜತೆಗೆ ಕೋಳಿಯೋ , ನಾಯಿ ಮರಿಯೋ ಇದ್ದರೆ ಅದಕ್ಕೂ ಟಿಕೆಟ್ ತೆಗೆದುಕೊಳ್ಳಬೇಕು. ಇದು ರಾಜ್ಯ ಸಾರಿಗೆ ಸಂಸ್ಥೆ ತಂದಿರುವ ಹೊಸ ನಿಯಮ. ಹೀಗಾಗಿ ಕೋಳಿಗೂ ಟಿಕೆಟ್ ನೀಡಿದ ಘಟನೆ ಗೌರಿಬಿದನೂರಿನಲ್ಲಿ ನಡೆದಿದೆ.
ಗೌರಿಬಿದನೂರಿನ 18 ಕಿ.ಮೀ ದೂರದಲ್ಲಿರುವ ಪೆದ್ದೇನಹಳ್ಳಿ ಗ್ರಾಮದ ಶ್ರೀನಿವಾಸ್ ಗೌರಿಬಿದನೂರಿನ ಸಂತೆಯಲ್ಲಿ 2 ನಾಟಿ ಕೋಳಿ ಖರೀದಿಸಿ ಅದನ್ನು ಒಂದು ಚೀಲದಲ್ಲಿ ಹಾಕಿಕೊಂಡು ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ತನ್ನೂರಾದ ಮುದ್ದಲೋಡು ಗೆ ಸಂಚರಿಸುತ್ತಿದ್ದರು. ಕಂಡೆಕ್ಟರ್ ಬಳಿ ಟಿಕೆಟ್ ಖರೀದಿಸಲು ಮುಂದಾದಾಗ ಅವರು ಕೋಳೀಗೂ ಟಿಕೆಟ್ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಇದನ್ನು ಕೇಳಿ ಒಮ್ಮೆಲೆ ಹೌಹಾರಿದ ಪ್ರಯಾಣಿಕ ಶ್ರೀನಿವಾಸ್ ಕೋಳಿಗೆ ಟಿಕೆಟ್ ಖರೀದಿಸಲು ನಿರಾಕರಿಸಿದ್ದಾರೆ. ಆಗ ನಿರ್ವಾಹಕ ರೂಲ್ಸ್ ಇರೋದೇ ಹೀಗೆ ಜೀವ ಇರೋದು ಏನೇ ತಂದರೂ ಟಿಕೆಟ್ ಪಡೆಯಲೇಬೇಕು ಎಂದು ವಾದಿಸಿದ್ದಾರೆ.
ಬಳಿಕ ”ಕೋಳಿಗಾಗಿ ಅರ್ಧ ಟಿಕೆಟ್ ನೀಡಲಾಗಿದೆ” ಎಂದು ಟಿಕೆಟ್ ಹಿಂದೆ ಶರಾ ಬರೆಯಿಸಿಕೊಂಡು ಒಂದು ಕೋಳಿಗೆ 12 ರೂ.ನಂತೆ ಎರಡು ಕೋಳಿಗೆ 24 ರೂಪಾಯಿ ಪಡೆದು ಟಿಕೆಟ್ ಪಡೆದಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಈ ಪ್ರದೇಶದಲ್ಲಿ ಭಾರಿ ಸುದ್ದಿಯಾಗಿದೆ.
ಈ ಘಟನೆಗೆ ಸ್ಪಷ್ಟನೆ ನೀಡಿರುವ ಕೆ ಎಸ್ ಆರ್ ಟಿ ಸಿ , 2018 ರ ಜನವರಿ 25 ರಂದು ರಾಜ್ಯ ರಸ್ತೆ ಸಾರಿಗೆ ನಿಗಮವು ಹೊರಡಿಸಿದ್ದ ಆದೇಶದಲ್ಲಿ ಸಾಕು ಪ್ರಾಣಿಗಳಿಗೂ ಟಿಕೆಟ್ ವಿಧಿಸುವ ನಿಯಮವನ್ನು ಜಾರಿ ಮಾಡಲಾಗಿದೆ . ನಾಯಿ ಮರಿ ಮೊಲ ಪಕ್ಷಿ ಗಳಿಗೆ ಮಕ್ಕಳಿಗೆ ನೀಡುವಂತೆ ಅರ್ಧ ಟಿಕೆಟ್ ನೀಡಲಾಗಿದೆ. ಇನ್ನು ನಾಯಿಯನ್ನು ಕೊಂಡೊಯ್ದರೆ ವಯಸ್ಕ ಪ್ರಯಾಣಿಕರಂತೆ ಪರಿಗಣಿಸಿ ಪೂರ್ಣ ಪ್ರಮಾಣದ ಟಿಕೆಟ್ ನೀಡಬೇಕಾಗುತ್ತದೆ ಎಂದಿದೆ.