ಕಾಸರಗೋಡು, ಜು 01 : ಆಹಾರ ಸುರಕ್ಷಾ ಅಧಿಕಾರಿಗಳು ಕಾಸರಗೋಡು ನಗರ ಹೊರವಲಯದ ಗೋದಾಮು ವೊಂದಕ್ಕೆ ಜೂ. 30 ರ ಶನಿವಾರ ದಾಳಿ ನಡೆಸಿ ಭಾರೀ ಮೌಲ್ಯದ ನಕಲಿ ತೆಂಗಿನೆಣ್ಣೆಯನ್ನು ವಶಪಡಿಸಿಕೊಂಡಿದ್ದಾರೆ. ಮಧ್ಯಾಹ್ನ ಆಹಾರ ಸುರಕ್ಷಾ ಸಹಾಯಕ ಆಯುಕ್ತ ಸಿ . ಎ ಜನಾರ್ಧನ ನೇತೃತ್ವದ ತಂಡವು ಮಿಂಚಿನ ದಾಳಿ ನಡೆಸಿದ್ದು , ಸುಮಾರು ಐದು ಸಾವಿರ ಲೀಟರ್ ತೆಂಗಿನೆಣ್ಣೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ನಿಷೇಧಿತ ಪಾಲಕ್ಕಾಡ್ ಆಫಿಯಾ ಕೋಕನಟ್ ಆಯಿಲ್ ನ ಹೆಸರು ಬದಲಾಯಿಸಿ ' ಕೇರ ವಾಲಿಸ್ ಆಗ್ ಮಾರ್ಕ್ ಸರ್ಟಿಫೈಡ್ ಪ್ರೊಡೆಕ್ಟ್ ' ಎಂದು ನಕಲಿ ಹೆಸರಿನಲ್ಲಿ ಮಾರಾಟಕ್ಕೆ ತಲುಪಿಸಲಾಗಿತ್ತು . ಬೇರ್ಕದ ಮುಹಮ್ಮದ್ ನವಾಜ್ ಎಂಬವರ ಮಾಲಕತ್ವದ ಗೋದಾಮಿನಲ್ಲಿ ನಕಲಿ ತೆಂಗಿನೆಣ್ಣೆ ಪ್ಯಾಕೆಟ್ ಗಳಾಗಿ ಪರಿವರ್ತಿಸಿ ಮಾರುಕಟ್ಟೆಗೆ ತಲಪಿಸಲಾಗುತ್ತಿತ್ತು .
ಪಾಲಕ್ಕಾಡ್ ಆಫಿಯಾ ತೆಂಗಿನೆಣ್ಣೆ ಕಲಬೆರಕೆ ಯಾದುದರಿಂದ ಈ ಉತ್ಪವನ್ನು ವರ್ಷದ ಹಿಂದೆ ಆಹಾರ ಇಲಾಖೆ ನಿಷೇಧಿಸಿತ್ತು. ಆಹಾರ ಸುರಕ್ಷಾ ಅಧಿಕಾರಿಗಳಿಗೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಲಾಗಿದ್ದು , ಎರಡು ಲೀಟರ್ ನ ಪ್ಯಾಕೆಟ್ ಹೊಂದಿದ್ದು , ಸುಮಾರು ಐದು ಸಾವಿರ ಲೀಟರ್ ನಕಲಿ ತೆಂಗಿನೆಣ್ಣೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದು , ತಪಾಸಣೆ ಕಳುಹಿಸಿದ್ದಾರೆ . ಕೆಲ ದಿನಗಳ ಹಿಂದೆ ಕಾಸರಗೋಡಿನ ಕೆಲ ಅಂಗಡಿಗಳಿಗೆ ದಾಳಿ ನಡೆಸಿದ ಸಂದರ್ಭದಲ್ಲಿ ಈ ನಕಲಿ ತೆಂಗಿನೆಣ್ಣೆ ಪ್ಯಾಕೆಟ್ ಪತ್ತೆಯಾಗಿತ್ತು . ಈ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದರು . ತಪಾಸಣಾ ವರದಿ ಬಂದ ಬಳಿಕ ಮಾಲಕನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.