ಕಾಸರಗೋಡು, ಜ. 15 (DaijiworldNews/MB) : ''ಕೊರೊನಾ ವಾಕ್ಸಿನೇಷನ್ನ ಮೊದಲ ಹಂತ ಕಾಸರಗೋಡು ಜಿಲ್ಲೆಯಲ್ಲಿ ಜ.16ರಂದು ನಡೆಯಲಿದೆ. ಬೆಳಗ್ಗೆ 9 ರಿಂದ ಆರಂಭಗೊಳ್ಳುವ ವಾಕ್ಸಿನೇಷನ್ ಪ್ರಕ್ರಿಯೆಗೆ ಜಿಲ್ಲೆ ಪೂರ್ಣರೂಪದಲ್ಲಿ ಸಜ್ಜುಗೊಂಡಿದೆ'' ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ಕಾಸರಗೋಡು ಜನರಲ್ ಆಸ್ಪತ್ರೆಯ ವಾಕ್ಸಿನೇಷನ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಸಿದ್ಧತೆಗಳು ಪೂರ್ಣ ರೂಪದಲ್ಲಿ ತೃಪ್ತಿಕರವಾಗಿವೆ ಎಂದು ಹೇಳಿದರು.
ವಾಕ್ಸಿನೇಷನ್ ಕೇಂದ್ರಗಳಲ್ಲಿ ಕಾದುಕುಳಿತುಕೊಳ್ಳುವವರ ಕೊಠಡಿ, ನೋಂದಣಿ ಕೊಠಡಿ, ವಾಕ್ಸಿನೇಷನ್ ಕೊಠಡಿ ಇತ್ಯಾದಿಗಲಲ್ಲದೆ, ವಾಕ್ಸಿನೇಷನ್ ಪಡೆದವರನ್ನು ಅರ್ಧ ತಾಸಿನ ಅವಧಿಗೆ ನಿಗಾ ಇರಿಸುವ ಕೊಠಡಿ ಸಜ್ಜುಗೊಂಡಿದೆ. ನಿಗಾ ಕೊಠಡಿಯಲ್ಲಿ ಆಕ್ಸಿಜನ್, ಮಾನಿಟರ್ ಸಹಿತ ಎಮರ್ಜೆನ್ಸಿ ಸೌಲಭ್ಯಗಳಿರುವ ಕ್ರಾಷ್ ಕಾರ್ಟ್, ಸ್ಟ್ರೆಚ್ಚರ್ ಟ್ರಾಲಿ, ಗಾಲಿ ಕುರ್ಚಿ ಇತ್ಯಾದಿ ಸಜ್ಜುಗೊಂಡಿದೆ.
ಕೋಯಿಕೋಡ್ ರೀಜನಲ್ ವಾಕ್ಸಿನ್ ಸ್ಟೋರ್ ನಿಂದ ಲಭಿಸಿರುವ ವಾಕ್ಸಿನ್ ಕಾಸರಗೋಡು ಜಿಲ್ಲೆಯ 9 ಕೇಂದ್ರಗಳಿಗೆ ತಲಪಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ವಾಕ್ಸಿನೇಷನ್ಗೆ ಅಗತ್ಯವಿರುವ ಸಿರಿಂಜ್ಗಳು, ವಾಕ್ಸಿನ್ ಕೆರಿಯರ್ಗಳು, ಐಸ್ ಪ್ಯಾಕ್ಗಳು ವಾಕ್ಸಿನ್ ಕೇಂದ್ರಗಳಲ್ಲಿ ಲಭ್ಯವಿವೆ. ಮೊದಲ ದಿನ ನೋಂದಣಿ ನಡೆಸಿರುವ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ವಾಕ್ಸಿನೇಷನ್ ನಡೆಸಲಾಗುವುದು. "ಕೋವಿನ್ ಆಪ್" ಬಳಸಿ ವಾಕ್ಸಿನೇಷನ್ ಗೆ ಆಗಮಿಸುವವರ ನೋಂದಣಿ ನಡೆಸಲಾಗುವುದು. ಇದಕ್ಕಾಗಿ ಎಲ್ಲ ಕೇಂದ್ರಗಳಲ್ಲೂ ಹೈಸ್ಪೀಡ್ ಇಂಟರ್ ನೆಟ್ ಕನೆಕ್ಟಿವಿಟಿ ಖಚಿತಪಡಿಸಲಾಗುತ್ತಿದೆ.
ಕಾಸರಗೋಡು ಜನರಲ್ ಆಸ್ಪತ್ರೆ, ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜು, ಕಾಞಂಗಾಡ್ ಜಿಲ್ಲಾ ಆಸ್ಪತ್ರೆ, ಮಂಗಲ್ಪಾಡಿ, ಬೇಡಡ್ಕ, ನೀಲೆಶ್ವರ, ಪನತ್ತಡಿ ತಾಲೂಕು ಆಸ್ಪತ್ರೆಗಳು, ಪೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಎಣ್ಣಪ್ಪಾರೆ ಕುಟುಂಬ ಆರೋಗ್ಯ ಕೇಂದ್ರಗಳಲ್ಲಿ ಪ್ರಾಥಮಿಕ ಹಂತದ ಕೋವಿಡ್ ವಾಕ್ಸಿನೇಷನ್ ನಡೆಸಲಾಗುವುದು.
ದ್ವಿತೀಯ ಹಂತದಲ್ಲಿ ಲಸಿಕೆ ನೀಡಿಕೆ ಸಂಬಂಧ ಈ 9 ಕೇಂದ್ರಗಳ ಸಹಿತ ಜಿಲ್ಲೆಯ 58 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ. ಮೂರನೇ ಹಂತದಲ್ಲಿ ಜಿಲ್ಲೆಯಲ್ಲಿ 329 ಕೇಂದ್ರಗಳನ್ನು ಆರಿಸಲಾಗಿದೆ ಎಂದು ತಿಳಿಸಿದ್ದಾರೆ.