ಕಾಸರಗೋಡು, ಜ.15 (DaijiworldNews/PY): ಮೊದಲ ಹಂತದ ಕೊರೊನಾ ವ್ಯಾಕ್ಸಿನ್ ಕಾಸರಗೋಡಿಗೆ ತಲುಪಿದೆ. 6,860 ವ್ಯಾಕ್ಸಿನ್ ಡೋಸ್ಗಳನ್ನು ಜ.14ರ ಗುರುವಾರ ಸಂಜೆ ಕಾಸರಗೋಡಿಗೆ ತಲುಪಿಸಲಾಗಿದ್ದು, ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ರಾಮದಾಸ್, ಡಾ. ಮುರಳೀಧರ ನಲ್ಲೂರಾಯ, ಸಹಾಯಕ ವೈದ್ಯಾಧಿಕಾರಿ ಎ.ಟಿ ಮನೋಜ್ ವ್ಯಾಕ್ಸಿನ್ ಅನ್ನು ಪಡೆದುಕೊಂಡರು.
ಮೊದಲ ಹಂತದಲ್ಲಿ 3100 ಮಂದಿಗೆ ವ್ಯಾಕ್ಸಿನ್ ನೀಡಲಾಗುವುದು. ಮೊದಲ ಹಂತದಲ್ಲಿ 9 ಕೇಂದ್ರಗಳಲ್ಲಿ, ಎರಡನೇ ಹಂತದಲ್ಲಿ 58 ಹಾಗೂ ಮೂರನೇ ಹಂತದಲ್ಲಿ 329 ಕೇಂದ್ರಗಳಲ್ಲಿ ವ್ಯಾಕ್ಸಿನ್ ವಿತರಿಸಲಾಗುವುದು.
ಮೊದಲ ಹಂತದಲ್ಲಿ ಜಿಲ್ಲೆಯ ವೈದ್ಯರು, ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಷಿಯನ್, ನರ್ಸಿಂಗ್ ಅಸಿಸ್ಟೆಂಟ್ಗಳಿಗೆ ಜನವರಿ 16 ರಂದು 9 ಕೇಂದ್ರಗಳಲ್ಲಿ ವ್ಯಾಕ್ಸಿನ್ ನೀಡಲಾಗುವುದು.
ಕಾಸರಗೋಡು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ, ಕಾಞಂಗಾಡ್ ಜಿಲ್ಲಾಸ್ಪತ್ರೆ, ಕಾಸರಗೋಡು ಜನರಲ್ ಆಸ್ಪತ್ರೆ, ನೀಲೇಶ್ವರ, ಪನತ್ತಡಿ, ಮಂಗಲ್ಪಾಡಿ, ಬೇಡಡ್ಕ ತಾಲೂಕು ಆಸ್ಪತ್ರೆಗಳು, ಪೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಎಣ್ಣಪ್ಪಾರ ಕುಟುಂಬ ಆರೋಗ್ಯ ಕೇಂದ್ರಗಳಲ್ಲಿ ಪ್ರಥಮ ಹಂತದಲ್ಲಿ ವ್ಯಾಕ್ಸಿನ್ ವಿತರಿಸಲಾಗುವುದು.
ಎರಡನೇ ಹಂತದಲ್ಲಿ 58 ವ್ಯಾಕ್ಸಿನ್ ಕೇಂದ್ರಗಳು, ಮೂರನೇ ಹಂತದಲ್ಲಿ ಸಾರ್ವಜನಿಕರಿಗೆ ವ್ಯಾಕ್ಸಿನ್ ನೀಡಲು 329 ಕೇಂದ್ರಗಳನ್ನು ಗುರುತಿಸಲಾಗಿದೆ.