ಉಡುಪಿ, ಜೂ30: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕರ್ನಾಟಕ ಕರಾವಳಿ, ಮಲೆನಾಡಿನ ಭಾಗದ ಜನ ಕಂಗಾಲಾಗಿದ್ದಾರೆ. ಮಹಾ ಮಳೆಗೆ ಶಿವಮೊಗ್ಗ ಹಾಗೂ ಉಡುಪಿಯನ್ನು ಸಂಪರ್ಕಿಸುವ ಆಗುಂಬೆ ಘಾಟ್ ನಲ್ಲಿ ಭೂ ಕುಸಿತ ಉಂಟಾಗಿತ್ತು. ಪರಿಣಾಮ, ಕಳೆದೆರಡು ದಿನಗಳ ಹಿಂದೆ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ್ದು, ಇಂದು ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಆಗುಂಬೆ ಘಾಟಿಯ 7ನೇ ತಿರುವಿನಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿದ್ದು ರಸ್ತೆ ಸಂಚಾರ ಅಸ್ತವ್ಯಸ್ಥವಾಗಿತ್ತು. ಭೂ ಕುಸಿತದ ಪರಿಣಾಮ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಇದೀಗ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಸಂಪೂರ್ಣ ಅನುಮತಿ ದೊರೆತಿದೆ.
ಉಡುಪಿಯಿಂದ ಶಿವಮೊಗ್ಗ- ಚಿಕ್ಕಮಗಳೂರು ಮಾರ್ಗವಾಗಿ ಬಸ್ ಓಡಾಟ ಶುರುವಾಗಲಿದೆ. ಆಗುಂಬೆ ಘಾಟ್ ನಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ನಡೆದಿದ್ದು ಮರಳು ಚೀಲ, ಕಾಂಕ್ರೀಟ್ ಜಲ್ಲಿ ಪುಡಿ ಹಾಕಲಾಗಿದೆ. ಲಾರಿ, ಟಿಪ್ಪರ್ ನಂಥ ಭಾರೀ ವಾಹನಗಳ ಸಂಚಾರ ನಿಷೇಧ ಮುಂದುವರೆದಿದ್ದು, ಬಸ್ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.