ಮಂಗಳೂರು, ಜೂ30: ಆಗ್ನೇಸ್ ವಿದ್ಯಾಸಂಸ್ಥೆ ರಾಜ್ಯ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿದ್ದು, ಇದರ ವಿರುದ್ಧ ಆರೋಪ ಸಲ್ಲದು ಎಂದು ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಸ್ಕಾರ್ಫ್ ವಿಚಾರವಾಗಿ ಆಗ್ನೇಸ್ ವಿದ್ಯಾ ಸಂಸ್ಥೆಯ ಹೆಸರು ಹಾಳು ಮಾಡುವ ಕಾರ್ಯ ನಡೆಯುತ್ತಿದೆ. ಸಂಸ್ಥೆಗೆ ಕುಂದು ತರುವ ಸುಳ್ಳು ಆರೋಪಗಳನ್ನು ಮಾಡಬೇಡಿ. ಏನೇ ಸಮಸ್ಯೆಗಳಿದ್ದರೂ, ಅಂತಹ ಸೂಕ್ಷ್ಮ ವಿಚಾರಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸಭೆ ನಡೆಸಿ ಸರಿಪಡಿಸಬಹುದಿತ್ತು. ನಿಯಮಗಳನ್ನು ಮೀರಿ ಪ್ರತಿಭಟನೆ ನಡೆಸಿರುವುದು ಸರಿಯಲ್ಲ. ನೇರವಾಗಿ ಬೀದಿಗಿಳಿಯುವ ಬದಲು ಸ್ಕಾರ್ಫ್ ವಿಚಾರವನ್ನು ಮಾತನಾಡಿ ಬಗೆಹರಿಸಬಹುದಿತ್ತು ಎಂದು ಹೇಳಿದ್ದಾರೆ.
ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಯಾವುದೇ ಸಂಸ್ಥೆಯ ಹೆಸರು ಹಾಳುಮಾಡುವುದು ಸರಿಯಲ್ಲ. ವಿದ್ಯಾರ್ಥಿನಿಗೆ ವಿದೇಶದಿಂದ ಬೆದರಿಕೆ ಕರೆ ಬಂದಿರುವ ವಿಚಾರವಾಗಿ ಪ್ರಕರಣ ದಾಖಲಿಸಲಾಗುತ್ತದೆ. ಹೊರಗಿನ ಸಂಘಟನೆಗಳು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುವ ಅವಶ್ಯಕತೆ ಇಲ್ಲ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಜೊತೆಗೆ ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲ ಸೃಷ್ಟಿಸುವವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸ್ಕಾರ್ಫ್ ವಿಚಾರವಾಗಿ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿದ್ದೇನೆ. ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಿ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.