ರಷ್ಯಾದಲ್ಲಿ ವಿಕೃತ ನರಹಂತಕ ದಂಪತಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ, ಇವರ ಕಥೆ ಕೇಳಿದವರೆ ಬೆಚ್ಚಿ ಬೀಳುತ್ತಾರೆ. ಕಾರಣ ಇವರು ನರ ಮಾಂಸ ಭಕ್ಷಕರು. ಕನಿಷ್ಟ 30 ಮಂದಿಗೆ ಮಾದಕ ದ್ರವ್ಯ ತಿನ್ನಿಸಿ, ಕೊಂದು ಬಳಿಕ ಅವರನ್ನು ತಿಂದು ಮುಗಿಸಿದ ಅತ್ಯಮಾನುಷ ಭೀಭತ್ಸಕರ ಕೃತ್ಯ ಎಸಗಿದ ರಶ್ಯನ್ ದಂಪತಿ ಇದೀಗ ಪೊಲೀಸರ ಬಲೆಯಲ್ಲಿದ್ದಾರೆ.ರಶ್ಯದ ಈ ಬಂಧಿತ ರಾಕ್ಷಸ ದಂಪತಿಯನ್ನು ನತಾಲಿಯಾ ಬಕ್ಷೀವಾ ಮತ್ತು ದಿಮಿತ್ರಿ ಬಕ್ಶೀವ್ ಎಂದು ಗುರುತಿಸಲಾಗಿದೆ. ಇವರನ್ನು ರಶ್ಯದ ಕ್ರಸ್ನದೋರ್ ಎಂಬಲ್ಲಿ ಸೆರೆ ಹಿಡಿಯಲಾಯಿತು.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ರಶ್ಯದ ಈ ರಾಕ್ಷಸೀ ಪ್ರವೃತ್ತಿಯ ದಂಪತಿ ತಮ್ಮ ಅಮಾಯಕ ಬಲಿಪಶುಗಳಿಗೆ ಹೈ ಡೋಸೆಜ್ ಡ್ರಗ್ ತಿನ್ನಿಸಿ ಅವರು ಜೀವಂತವಿರುವಾಗಲೇ ಅವರ ಚರ್ಮವನ್ನು ಸುಲಿದು, ಅವರ ಅಂಗಾಂಗಗಳನ್ನು ಡೀಫ್ ಫ್ರೀಜರ್ನಲ್ಲಿ ದಾಸ್ತಾನು ಇರಿಸಿ ಬಳಿಕ ತಿನ್ನುತ್ತಿದ್ದರು.
ಈ ರಕ್ಕಸ ದಂಪತಿಯನ್ನು ಸೆರೆ ಹಿಡಿಯುವುದಕ್ಕೆ ನಗರದ ರಸ್ತೆಯೊಂದರಲ್ಲಿ ಬಿದ್ದಿದ್ದ ಮೊಬೈಲ್ ಫೋನ್ ಸುಳಿವು ನೀಡಿತು. ಆ ಮೊಬೈಲ್ನಲ್ಲಿ ಮನುಷ್ಯರ ಅಂಗಾಂಗಗಳನ್ನು ವ್ಯಕ್ತಿಯೊಬ್ಬ ತಿನ್ನುತ್ತಿದ್ದ ಫೋಟೋಗಳು ಇದ್ದವು. ಈ ಮೊಬೈಲ್ ಫೋನ್ ಮೂಲಕವೇ ರಕ್ಕಸ ದಂಪತಿಯ ಜಾಡನ್ನು ಪೊಲೀಸರು ಪತ್ತೆ ಹಚ್ಚಿದರು.
ಬಿಬಿಸಿ ವರದಿ ಪ್ರಕಾರ ಈ ದಂಪತಿ ತಾವು ಕನಿಷ್ಠ 30 ಮಂದಿಗೆ ಡ್ರಗ್ ತಿನ್ನಿಸಿ, ಚರ್ಮ ಸುಲಿದು, ಕೊಂದು, ಅವರ ಅಂಗಾಂಗಗಳನ್ನು ತಿಂದಿರುವುದಾಗಿ ಪೊಲೀಸರಲ್ಲಿ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.ವಿಶೇಷವೆಂದರೆ ಈ ದಂಪತಿ ಮಿಲಿಟರಿ ನೆಲೆಯೊಂದರಲ್ಲಿ ಕೆಲಸ ಮಾಡುತ್ತಿತ್ತು ಎಂಬುದು ಗೊತ್ತಾಗಿದೆ. ಇವರ ಈ ವಿಕೃತ ಕೃತ್ಯ ಕೇಳಿ ರಷ್ಯಾ ಜನ ಬೆಚ್ಚಿಬಿದ್ದಿದ್ದಾರೆ.