ಮಂಗಳೂರು, ಜೂ29: ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರಾವಳಿಯ ಈಜು ಪಟು ಮೋನ್ಯಾ ಕೌಸುಮಿ (8) ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
35ನೇ ಸಬ್ ಜೂನಿಯರ್ ಹಾಗೂ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್ ಶಿಪ್ ನಲ್ಲಿ ಮೋನ್ಯಾ 4x50 ಮೆಡ್ಲಿ ರಿಲೆಯಲ್ಲಿ ಕಂಚಿನ ಪದಕ ಹಾಗೂ 4x 50 ಮೀಟರ್ ಫ್ರೀಸ್ಟೈಲ್ ರಿಲೇಯ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಮಾತ್ರವಲ್ಲ, ಫ್ರೀಸ್ಟೈಲ್ ರಿಲೇಯಲ್ಲಿ 4 ನೇ ಸ್ಥಾನದಲ್ಲಿದ್ದ ಕರ್ನಾಟಕ ತಂಡವನ್ನು 33.6 ಸೆಕೆಂಡ್ಸ್ ಅಂತರದಲ್ಲಿ 2ನೇ ಸ್ಥಾನಕ್ಕೇರಿಸಿ ಪದಕ ಗೆಲ್ಲಲು ನೆರವಾಗಿದ್ದಾರೆ.
ಈ ಹಿಂದೆ ಮೈಸೂರಿನಲ್ಲಿ ನಡೆದ ಸಬ್ ಜೂನಿಯರ್ ಹಾಗೂ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್ ಶಿಪ್ ನ 50 ಫ್ರೀಸ್ಟೈಲ್ ರಿಲೇಯಲ್ಲಿ ಗೆದ್ದಿದ್ದರು. ಈ ಮೂಲಕ ಪುತ್ತೂರು ಅಕ್ವಾಟಿಕ್ ಕ್ಲಬ್ ನಿಂದ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾದ ಅತಿ ಕಿರಿಯ ಈಜುಪಟು ಎಂಬ ಹೆಗ್ಗಳಿಕೆಗೆ ಮೋನ್ಯಾ ಕೌಸುಮಿ ಪಾತ್ರರಾಗಿದ್ದರು. ಇದೀಗ ಮೋನ್ಯಾ ರಾಷ್ಟ್ರೀಯ ಈಜು ಚಾಂಪಿಯನ್ ಶಿಪ್ ನಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮೋನ್ಯಾ ಪುತ್ತೂರಿನ ಕಮಲ್-ರಹಾನಿ ಪುತ್ರಿಯಾಗಿದ್ದು, ಸೇಂಟ್ ಫಿಲೋಮಿನಾ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ 4 ನೇ ತರಗತಿಯ ವಿದ್ಯಾರ್ಥಿನಿ. ಎಳೆಯ ವಯಸ್ಸಿನಲ್ಲಿಯೇ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಈಕೆಗೆ ಕೋಚ್ ಪಾರ್ಥ ವಾರಾಣಸಿ, ನಿರೂಪ್, ರೋಹಿತ್, ಸತ್ಯ ತರಬೇತಿ ನೀಡುತ್ತಿದ್ದಾರೆ.
ಇದೀಗ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಂಚು ಮತ್ತು ಬೆಳ್ಳಿ ಪದಕ ಗೆಲ್ಲುವುದರ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಹೆಸರು ತಂದು ಕೊಟ್ಟಿದ್ದಾರೆ. ಮಾತ್ರವಲ್ಲ ಬಾಲಕಿಯ ಈ ಸಾಧನೆಗೆ ಪ್ರಶಂಸೆ ವ್ಯಕ್ತವಾಗಿದೆ.