ಬೆಳ್ತಂಗಡಿ ಜೂ 28 : ಕಳೆದ ಹನ್ನೆರಡು ದಿನಗಳಿಂದ ಧರ್ಮಸ್ಥಳದ ಶಾಂತಿವನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಬೆಳಿಗ್ಗೆ ಶಾಂತಿವನದಲ್ಲಿ ಚಿಕಿತ್ಸೆಯನ್ನು ಪೂರ್ಣಗೊಳಿಸಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಧ ಸ್ವಾಮಿಯ ದರ್ಶನ ಪಡೆದು ಮಂಗಳೂರು ಮೂಲಕ ಬೆಂಗಳೂರಿಗೆ ಹಿಂತಿರುಗಿದರು. ಇದರೊಂದಿಗೆ ಕಳೆದ ಒಂದುವಾರದಿಂದ ರಾಜ್ಯ ರಾಜಕೀಯದ ಕೇಂದ್ರಸ್ಥಾನವಾಗಿ ಮಾರ್ಪಟ್ಟಿದ್ದ ಶಾಂತಿವನದಲ್ಲಿ ರಾಜಕೀಯ ಚಟುವಟಿಕೆಗಳಿಗೆ ಕೊನೆಗೂ ಮುಕ್ತಾಯಗೊಂಡಿದೆ.
ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದು ಬಂದ ಸಿದ್ದರಾಮಯ್ಯ ಅವರು ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದರು. ನಾನು ಇಲ್ಲಿ ಯಾವುದೇ ರಾಜಕೀಯ ಮಾತನಾಡುವುದಿಲ್ಲ ಎಂದರು. ಆರೋಗ್ಯ ಸುಧಾರಿಸಿದೆಯೇ ಎಂಬ ಪ್ರಶ್ನೆಗೆ ನಾನು ಆರೋಗ್ಯವಂತನಾಗಿದ್ದೇನೆ. ಯಾವುದೇ ಆರೋಗ್ಯ ಸಮಸ್ಯೆ ಇಟ್ಟುಕೊಂಡು ಇಲ್ಲಿಗೆ ಬಂದಿರಲಿಲ್ಲ ಇಲ್ಲಿ ಉತ್ತಮ ಚಿಕಿತ್ಸೆ ನೀಡಿದ್ದಾರೆ ಎಲ್ಲವೂ ಚೆನ್ನಾಗಿದೆ ಎಂದಷ್ಟೇ ಹೇಳಿ ಪ್ರಯಾಣ ಮುಂದುವರಿಸಿದರು.
ಇಂದು ಬೆಳಗ್ಗಿನಿಂದಲೇ ಸಿದ್ದರಾಮಯ್ಯ ಅವರನ್ನು ನೋಡಲು ಅಭಿಮಾನಿಗಳು ಶಾಂತಿವನಕ್ಕೆ ಬರುತ್ತಲೇ ಇದ್ದರು. ಇಂದು ಯಾವುದೇ ತಡೆಯಿಲ್ಲದೆ ಅಭಿಮಾನಿಗಳಿಗೆ ಅವರನ್ನು ಭೇಟಿಯಾಗಲು ಅವಕಾಶ ನೀಡಲಾಯಿತು. ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ತೆಗೆದು ಸಂಭ್ರಮಿಸಿದರು.
11.30 ಕ್ಕೆ ಶಾಂತಿವನದಿಂದ ಹೊರಟ ಸಿದ್ದರಾಮಯ್ಯ ಅವರು ನೇರವಾಗಿ ಶ್ರೀಕ್ಷೇತ್ರಕ್ಕೆ ಬಂದರು, ಅವರನ್ನು ಶ್ರೀ ಕ್ಷೇತ್ರದ ವತಿಯಿಂದ ಸ್ವಾಗತಿಸಲಾಯಿತು. 12 ಗಂಟೆಗೆ ದೇವಸ್ಥಾನಕ್ಕೆ ತೆರಳಿದ ಅವರು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಹೊರಗೂ ಸೇರಿದ್ದ ಅಭಿಮಾನಿಗಳಿಗೆ ವಂದನೆ ಸಲ್ಲಿಸಿದರು. ಅವರೊಂದಿಗೆ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಐವನ್ ಡಿಸೋಜ, ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ಇತರರು ಇದ್ದರು.
ಉತ್ತಮ ಸಾಧಕ - ಡಾ. ಪ್ರಶಾಂತ್ ಶೆಟ್ಟಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದು ಮೂರನೇ ಬಾರಿಗೆ ಶಾಂತಿವನಕ್ಕೆ ಆಗಮಿಸಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅವರೊಬ್ಬ ಉತ್ತಮ ಸಾಧಕರಾಗಿದ್ದಾರೆ. ಶಾಂತಿವನದ ಎಲ್ಲ ಪದ್ದತಿಗಳನ್ನೂ ಅತ್ಯಂತ ಶ್ರದ್ದೆಯಿಂದ ಪಾಲಿಸಿ ಎಲ್ಲದರಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಾರೆ. ಇಲ್ಲಿನ ಆಹಾರ ಪದ್ದತಿ ಚಿಕಿತ್ಸಾ ಪದ್ದತಿ ಯೋಗ ಎಲ್ಲವೂ ಅವರಿಗೆ ಪರಿಚಿತವಾಗಿದೆ. ತಾನೊಬ್ಬ ವಿಐಪಿ ಎಂಬ ಭಾವನೆಯಿಲ್ಲದೆ ಎಲ್ಲ ಸಾಧಕರೊಂದಿಗೆ ಬೆರೆತು ಎಲ್ಲ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತಾರೆ ಎಂದರು. ಶಾಂತಿವನದಲ್ಲಿ ಮನಸ್ಸು ಮತ್ತು ಶರೀರಕ್ಕೆ ಚಿಕಿತ್ಸೆ ನೀಡಲಾಗುತ್ತಿದ್ದು ಇಲ್ಲಿನ ಚಿಕಿತ್ಸೆಯಿಂದ ಅವರು ಮಾನಸಿಕವಾಗಿ ಮತ್ತು ದೈಹಿಕವಾಹಿ ಹೊಸ ಚೈತನ್ಯವನ್ನು ಪಡೆದಿದ್ದಾರೆ. ಅವರ ದೇಹದ ತೂಕದಲ್ಲಿ ಮೂರು ಕೆ.ಜಿ ಕಡಿಮೆಯಾಗಿದೆ. ಅವರು ಶಾಂತಿವನದ ಆಹಾರ ಪದ್ದತಿಯನ್ನು ಸಂಪೂರ್ಣವಾಗಿ ಪಾಲಿಸಿದ್ದಾರೆ ಎಂದು ಮಾಹಿತಿ ನೀಡಿದರು.