ಮಂಗಳೂರು ಜೂ 28 : ಮುಲ್ಲರಪಟ್ನ ಸೇತುವೆ ಕುಸಿದು ಸಂಪರ್ಕ ಸ್ಥಗಿತಗೊಂಡ ಬೆನ್ನಲ್ಲೇ ರಾಜ್ಯದ ಪ್ರಮುಖ ಅಧಿಕಾರಿಗಳು ಸಹಿತ ತಜ್ಞರ ತಂಡವು ಗುರುಪುರ ಸೇತುವೆಯ ಸುರಕ್ಷತೆಯ ಬಗ್ಗೆ ಸಮೀಕ್ಷೆ ನಡೆಸಿದೆ . ಈ ಹಿನ್ನಲೆಯಲ್ಲಿ ಸೇತುವೆಯಲ್ಲಿ ಕೆಲ ಗಂಟೆಗಳ ಕಾಲ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಬೆಳಗಾವಿಯಿಂದ ತರಿಸಲಾಗಿದ್ದ ಯಂತ್ರದ ಮೂಲಕ ತಜ್ಞರ ತಂಡ ಸಮೀಕ್ಷೆ ನಡೆಸಿದೆ. . ಈ ಯಂತ್ರದಲ್ಲಿ ಕುಳಿತು ಸೇತುವೆ ತಳಭಾಗಕ್ಕೂ ತೆರಳಬಹುದಾಗಿದೆ.
ಇನ್ನು ಸಮೀಕ್ಷೆಯ ಸಂದರ್ಭದಲ್ಲಿ ಗುರುಪುರ ಸೇತುವೆ ಒಂದು ಕಾಂಕ್ರಿಟ್ ತುಂಡು ಕತ್ತರಿಸಿ ತೆಗೆದು ಅದರ ಬಾಳಿಕೆ ಬಗ್ಗೆಯೂ ತಜ್ಞರು ಸಮೀಕ್ಷೆ ನಡೆಸಿದ್ದಾರೆ. ಈ ಸೇತುವೆ ಎಷ್ಟು ಭಾರ ಹೊರುವ ಸಾಮರ್ಥ್ಯ ಹೊಂದಿದೆ ಮತ್ತು ಕಬ್ಬಿಣ ಬಾಳಿಕೆಯ ಬಗ್ಗೆಯೂ ತಜ್ಞರು ಸಮೀಕ್ಷೆ ನಡೆಸಿದ್ದಾರೆ. ಅಗತ್ಯವಿದ್ದರೆ ನಿರ್ವಹಣೆ ಮಾಡಬೇಕಾದ ಬಗ್ಗೆಯೂ ಪೂರ್ಣ ಸಮೀಕ್ಷೆ ನಡೆಸಿ ಬಳಿಕ ತಜ್ಞರ ತಂಡ ಅಂತಿಮ ವರದಿ ಕೊಡಲಿದೆ. ಈ ಸೇತುವೆ 95 ವರ್ಷಗಳ ಹಿಂದಿನ ಸೇತುವೆಯಾಗಿದೆ.
ಇನ್ನು ಸೇತುವೆಯ ಸಮೀಕ್ಷೆ ಹಿನ್ನಲೆಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿತ್ತು. ಗುರುಪುರ ಸೇತುವೆ ತುರ್ತು ನಿರ್ವಹಣೆ ಕಾಮಗಾರಿ ಬೆಳಿಗ್ಗೆ 5 ಗಂಟೆಯಿಂದ 10 ಗಂಟೆಯವರೆಗೆ ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.
ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಈ ಸಮಯದಲ್ಲಿ ವಾಮಂಜೂರು- ಪಚ್ಚನಾಡಿ-ಬೋಂದೆಲ್-ಕಾವೂರು-ಬಜಪೆ- ಕೈಕಂಬ ಮಾರ್ಗದಲ್ಲಿ ವಾಹನಗಳು ಸಂಚರಿಸಿತ್ತು.