ಮಂಗಳೂರು, ಜೂ27: ಆಪ್ತರ ವಲಯದಲ್ಲಿ ನಾನು ಅಭಿಪ್ರಾಯ ಹಂಚಿಕೊಂಡಿದ್ದು ಹೌದು. ಆದರೆ ನನ್ನ ಜೊತೆಗಿದ್ದ ಆಪ್ತರೇ ಇದೀಗ ಹಿಂದಿನಿಂದ ನಿಂತು ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ ಹೇಳಿಕೆ ನೀಡಿರುವ ವಿಡಿಯೋವೊಂದು ಮಂಗಳವಾರವಷ್ಟೇ ವೈರಲ್ ಆಗಿತ್ತು. ಮಾತ್ರವಲ್ಲ, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಸರ್ಕಾರದ ಅವಧಿಯ ಕುರಿತು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದರು.
ಇದೀಗ ಈ ವಿಡಿಯೋ ಕುರಿತು ಸಿಎಂ ಸಿದ್ದರಾಮಯ್ಯ ಮೈಸೂರಿನ ಆಪ್ತರ ಜೊತೆ ಮಾತನಾಡಿದ್ದಾರೆ. ನನ್ನನ್ನು ಭೇಟಿ ಮಾಡಲು ಬಂದ ಆಪ್ತರೊಂದಿಗೆ ನಾನು ಅಭಿಪ್ರಾಯ ಹಂಚಿಕೊಂಡಿದ್ದೆ. ಆದರೆ ಅದನ್ನು ರೆಕಾರ್ಡ್ ಮಾಡಿ ಮಾಧ್ಯಮಗಳಿಗೆ ನೀಡಿ ವೈರಲ್ ಮಾಡಿದ್ದಾರೆ. ಹಿಂದಿನಿಂದ ನಿಂತು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ಧಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ರಾಜ್ಯ ಸರ್ಕಾರದ ಕುರಿತು ಯಾವುದೇ ರೀತಿಯ ಬಹಿರಂಗ ಹೇಳಿಕೆಗಳನ್ನು ನೀಡಿಲ್ಲ. ಆದರೆ ವಿವಾದವನ್ನು ಉಂಟು ಮಾಡಲು ಈ ರೀತಿಯ ಕೆಲಸ ಮಾಡಿದ್ದಾರೆ. ಸರ್ಕಾರದ ಕುರಿತು ಉದ್ದೇಶ ಪೂರ್ವಕವಾಗಿ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.