ಸುಳ್ಯ, ಜೂ 27: ಇಲ್ಲಿನ ಬೆಳ್ಳಾರೆ ಹಾಲಿನ ಡೈರಿಗೆ ಹಾಲುಕೊಂಡು ಹೋಗಿ ಮನೆಗೆ ಮರಳುತ್ತಿದ್ದ ಯುವತಿಯ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಆರೋಪಿಗಳನ್ನು ಬಂಧಿಸುವಲ್ಲಿ ಬೆಳ್ಳಾರೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮೂಡ್ನೂರು ಗ್ರಾಮ ನಿವಾಸಿಗಳಾದ ಜಯಪ್ರಕಾಶ್ ( 25), ರಂಜಿತ್ ಎನ್ ಕೆ (20 ) ಹಾಗು ರವೀಂದ್ರ(35) ಎಂದು ಗುರುತಿಸಲಾಗಿದೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ ಎರಡು ರಿಕ್ಷಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಗಳಲ್ಲಿ ಓರ್ವ ಕೂಲಿ ಕಾರ್ಮಿಕರಾಗಿದ್ದು, ಉಳಿದ ಇಬ್ಬರು ರಿಕ್ಷಾ ಚಾಲಕರಾಗಿದ್ದಾರೆ. ಆರೋಪಿಗಳು ಯುವತಿಯ ಬಾಯಿಗೆ ಬಟ್ಟೆ ತುರುಕಿ ಕೃತ್ಯ ಎಸಗಿದ್ದು, ಈ ವಿಚಾರ ಮನೆಯವರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದರು. ಬಳಿಕ ರಿಕ್ಷಾದಲ್ಲಿ ಕುಳ್ಳಿರಿಸಿ ಅದೇ ರಿಕ್ಷಾದಲ್ಲಿ ಮನೆಗೆ ತಂದು ಬಿಟ್ಟಿದ್ದಾರೆ. ಇದೇ ಸಂದರ್ಭ ಯುವತಿಯ ಅಣ್ಣ ಇದನ್ನು ಗಮನಿಸಿದ್ದು ಅತ್ಯಾಚಾರ ವಿಷಯ ಬೆಳಕಿಗೆ ಬಂದಿದೆ.
ಘಟನೆಯ ವಿವರ
ಬೆಳ್ಳಾರೆಯ ಶೇಣಿ ಎಂಬಲ್ಲಿ ಜೂನ್ 25ರ ಸಂಜೆ 3.45ರ ಹೊತ್ತಿಗೆ ಮನೆಯಿಂದ ಹೊರಟ ಯುವತಿ ಹಾಲನ್ನು ಡೈರಿಗೆ ಕೊಟ್ಟು ವಾಪಸ್ ಮನೆಗೆ ಹೋಗುವ ಸಂದರ್ಭದಲ್ಲಿ ಚೊಕ್ಕಾಡಿ ಕಡೆಯಿಂದ ಆಟೋ ಬಂದು ಅದರಲ್ಲಿದ್ದ ಮೂರು ಜನ ಅಪರಿಚಿತರು ಮನೆಗೆ ವಾಪಾಸಾಗುತ್ತಿದ್ದ ಯುವತಿಯನ್ನು ಬಲವಂತವಾಗಿ ಎತ್ತಿಕೊಂಡು ರಿಕ್ಷಾದ ಒಳಗೆ ಹಾಕಿ ಚೊಕ್ಕಾಡಿ ಸಮೀಪದ ರಬ್ಬರ್ ತೋಟ ಒಂದರಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.