ಬೆಳ್ತಂಗಡಿ, ಜೂ 27: ಧರ್ಮಸ್ಥಳದ ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾಯಲಯದಲ್ಲಿ ಪ್ರಕೃತಿ ಚಿಕಿತ್ಸೆಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲಾಗಿ ಅಲ್ಲಿ ಹನ್ನೊಂದು ದಿನಗಳನ್ನು ಕಳೆದಿದ್ದಾರೆ. ರಾಜಕೀಯದ ಬಿರುಸಿನ ಕಾರ್ಯಚಟುವಟಿಕೆಯಿಂದ ಶುಗರ್, ಬಿಪಿ ಹೆಚ್ಚಿಸಿಕೊಂಡಿದ್ದ 69ರ ಹರೆಯದ ಸಿದ್ದರಾಮಯ್ಯ ಚಿಕಿತ್ಸೆಯ ಸಂದರ್ಭದಲ್ಲಿ ಮಾಂಸಾಹಾರ ಸಂಪೂರ್ಣ ವರ್ಜಿಸಿ ರಾಗಿ ಗಂಜಿ ,ಹಸಿ ತರಕಾರಿ, ಮೊಳಕೆ ಕಾಳು, ಸಲಾಡ್ ಮತ್ತು ಮಜ್ಜಿಗೆ ಇವುಗಳನ್ನು ಸೇವನೆ ಮಾಡುತ್ತಿದ್ದರು. ಇದರ ಜತೆಗೆ ಉಪ್ಪು, ಹುಳಿ, ಖಾರ ನಿಷಿದ್ದ . ರಾತ್ರಿ ಊಟವೆಂದರೆ ಬೇಯಿಸಿದ ತರಕಾರಿ, ಎರಡು ಚಪಾತಿ, ಮಜ್ಜಿಗೆ, ಪಪ್ಪಾಯಿ ಮಾತ್ರ ಸೇವಿಸುತ್ತಿದ್ದರು.
ಹೀಗೆ ಪಥ್ಯಹಾರದ ಜತೆಗೆ ವಿಶ್ರಾಂತಿ, ಜಲ ಚಿಕಿತ್ಸೆ, ಹೈಡ್ರೋಥೆರಪಿ, ಯೋಗಾಭ್ಯಾಸ, ಮಸಾಜ್ ಗಳ ಚಿಕಿತ್ಸೆಗಗಳನ್ನು ಪಡೆದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಲಿಮ್ ಆಗಿದ್ದಾರೆ. ಈಗಾಗಲೇ ಇಲ್ಲಿ ದಾಖಲಾಗಿ 11 ದಿನಗಳು ಕಳೆದಿದ್ದು, ಮೂರು ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. 12 ದಿನಗಳ ಪ್ರಕೃತಿ ಚಿಕಿತ್ಸೆಗಾಗಿ ದಾಖಲಾಗಿರುವ ಸಿದ್ದರಾಮಯ್ಯ ಇಂದು ಕೊನೆಯ ದಿನದ ಚಿಕಿತ್ಸೆ ಪಡೆಯಲಿದ್ದಾರೆ . ನಾಳೆ ಅಂದರೆ ಜೂ 28 ರ ಗುರುವಾರ ಬೆಳಗ್ಗೆ 10 ಗಂಟೆಗೆ ಚಿಕಿತ್ಸಾಲಯದಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಅಲ್ಲಿಂದ ಅವರು ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.