ಕುಂದಾಪುರ, ಜೂ 27: ಆತ ಮಧ್ಯಪ್ರದೇಶದ ವ್ಯಕ್ತಿ, ಆಕೆ ಉತ್ತರ ಪ್ರದೇಶದಾಕೆ. ಇಬ್ಬರದ್ದು ಪ್ರೇಮ ವಿವಾಹ. ಹತ್ತು ವರ್ಷದ ದಾಂಪತ್ಯ ಜೀವನದಲ್ಲಿ ಅದೇನೋ ಬಿರುಕು ಬಂದಿತ್ತೊ ಗೊತ್ತಿಲ್ಲ. ಪತ್ನಿ ಪತಿರಾಯನನನು ತೊರೆದು ೭ ವರ್ಷ ಮಗುವಿನೊಂದಿಗೆ ನಾಪತ್ತೆಯಾಗಿದ್ದಾಳೆ. ಪತ್ನಿ-ಪುತ್ರರಿಲ್ಲದೆ ಪತಿ ಚಿಂತಾಕ್ರಾಂತನಾಗಿದ್ದಾನೆ. ಕುಂದಾಪುರ ಪೊಲೀಸ್ ಠಾಣೆಗೂ, ಮಹಿಳಾ ಸಾಂತ್ವಾನ ಕೇಂದ್ರಕ್ಕೂ ಪತ್ನಿಪುತ್ರನ ಹುಡುಕಿ ಕೊಡಿ ಎಂದು ಯಾಚಿಸುತ್ತಿರುವ ದೃಶ್ಯ ಕಂಡು ಬಂದಿದೆ.
ಕುಂದಾಪುರ ಖಾಸಗಿ ಕಂಪನಿಯ ಬೆಂಗಳೂರು ಬಸ್ ಚಾಲಕನಾಗಿರುವ ರಂಜಿತ್ ಸಿಂಗ್ (32 ) ಮಧ್ಯಪ್ರದೇಶ ರಾಜ್ಯದ ಕೃಷ್ಣಾನಗರ, ಬಿನ್ಮೂರ ಜಿಲ್ಲೆಯಾತ. ಕಳೆದ ಎರಡು ವರ್ಷಗಳಿಂದ ಪತ್ನಿ ಕುಂತಿದೇವಿ(28 ) ಪುತ್ರ ಸನ್ನಿ (7) ಇವರೊಂದಿಗೆ ಕುಂದಾಪುರ ಸಮೀಪದ ಕೋಟೇಶ್ವರದ ಎನ್.ಆರ್.ಐ ಅಪಾರ್ಟ್ಮೆಂಟ್ನಲ್ಲಿ ಬಾಡಿಗೆಗೆ ಮನೆಯಲ್ಲಿ ವಾಸವಾಗಿದ್ದರು. ಪತ್ನಿ ಕುಂತಿದೇವಿ ಉತ್ತರ ಪ್ರದೇಶದವಳಾಗಿದ್ದು ಇವರದ್ದು ಪ್ರೇಮ ವಿವಾಹ. ಕಳೆದ ಹತ್ತು ವರ್ಷಗಳ ಹಿಂದೆ ಇವರ ವಿವಾಹ ಗ್ರಾಮಸ್ಥರ ಸಮ್ಮುಖದಲ್ಲಿ ನಡೆದಿತ್ತು. ಪತಿ ರಂಜಿತ್ ಸಿಂಗ್ ಬಸ್ ಚಾಲಕನಾಗಿ ಕುಂದಾಪುರಕ್ಕೆ ಬಂದ ಕಾರಣ ಕೋಟೇಶ್ವರದಲ್ಲಿ ಬಾಡಿಗೆ ಮನೆ ಮಾಡಿದ್ದರು. ಪುತ್ರ ಸನ್ನಿಯನ್ನು ಕೋಡಿ ರಸ್ತೆಯ ಸೈಂಟ್ ಪಿಯುಸ್ ಶಾಲೆಗೆ ಸೇರಿಸಿದ್ದು ಆತ ಎರಡನೇ ತರಗತಿಯಲ್ಲಿ ಓದುತ್ತಿದ್ದ. ಕುಟುಂಬದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಬರುತ್ತಿದ್ದು ಪತ್ನಿ ತನ್ನನ್ನು ಬಿಟ್ಟು ಹೋಗುತ್ತಾಳೆ ಎಂದು ರಂಜಿತ್ ಸಿಂಗ್ ಭಾವಿಸರಲಿಲ್ಲವಂತೆ.
ಜೂನ್ 23 ರಂದು ಬೆಳಿಗ್ಗೆ ಕೆಲಸ ಮುಗಿಸಿ ಎಂದಿನಂತೆ ಮನೆಗೆ ಬಂದಾಗ ಮನೆಗೆ ಬೀಗ ರಂಜಿತ್ ಸಿಂಗ್ನನ್ನು ಸ್ವಾಗತಿಸಿದೆ. ಕೂಡಲೇ ಅದೇ ಕಟ್ಟಡದ ಮೇಲ್ಮಹಡಿಯಲ್ಲಿರುವ ರಂಜಿತ್ ಸಿಂಗ್ ಸಹೋದರನ ರೂಮ್ನಲ್ಲಿ ವಿಚಾರಿಸಿದಾಗ ಬೆಳಿಗ್ಗೆ ಮಗುವನ್ನು ಶಾಲಾ ಬಸ್ಸಿಗೆ ಹತ್ತಿಸಿರುವುದನ್ನು ನೋಡಿದ್ದಾರೆ ಎನ್ನಲಾಗಿದೆ. ಕೂಡಲೇ ಮಗು ಓದುತ್ತಿರುವ ಸ್ಕೂಲ್ಗೆ ಹೋಗಿ ವಿಚಾರಿಸಿದಾಗ ಅಘಾತಕಾರಿ ಅಂಶ ರಂಜಿತ್ ಸಿಂಗ್ ಗೊತ್ತಾಗಿದೆ. ಶಾಲೆಗೆ ಬಂದ ಕುಂತಿದೇವಿ ತನ್ನ ಗಂಡನಿಗೆ ಅಪಘಾತವಾಗಿದೆ. ಹಾಗಾಗಿ ನಾವು ರೂಮ್ ಖಾಲಿ ಮಾಡುತ್ತಿದ್ದೇವೆ. ಮಗುವಿನ ಟಿಸಿ ಪಡೆದುಕೊಂಡು ಹೋಗಿದ್ದಾಳೆ.
ತಕ್ಷಣ ರಂಜಿತ್ಸಿಂಗ್ಗ ಪತ್ನಿಯ ಹುಡುಕಾಟದಲ್ಲಿ ನಿರತನಾಗಿದ್ದಾನೆ. ತನ್ನ ಊರಿಗೂ ಹಾಗೂ ಪತ್ನಿಯ ಊರಿಗೂ ಪೋನ್ ಮಾಡಿ ವಿಚಾರಿಸಿದ್ದಾನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೆಂಡತಿ ಮಗ ಎಲ್ಲಿಗೆ ಹೋದರು ಎನ್ನುವ ಬಗ್ಗೆ ಸಣ್ಣ ಕುರುಹುಗಳು ಕೂಡಾ ಸಿಗಲಿಲ್ಲ. ಇದರಿಂದ ಕಂಗೆಟ್ಟ ರಂಜಿತ್ ಸಿಂಗ್ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪತ್ನಿ ಮಗ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾರೆ. ನಂತರ ಕುಂದಾಪುರದ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ತೆರಳಿ ಮನವಿ ಸಲ್ಲಿಸಿದ್ದಾನೆ.
ಪತ್ನಿ ಮಗ ನನಗೆ ಜೀವ, ಅವರಿಲ್ಲದೆ ನನಗೆ ಬದುಕು ಸಾಧ್ಯವಿಲ್ಲ. ಯಾರಾದರೂ ನನ್ನ ಪತ್ನಿ, ಮಗುವನ್ನು ಹುಡುಕಿ ಕೊಡಿ ಎಂದು ದಯಾನೀಯವಾಗಿ ಯಾಚಿಸುವ ದೃಶ್ಯ ಮನ ಕಲಕುವಂತಿದೆ.