ಮಂಗಳೂರು, ಜೂ 26 : "ಈ ಸೇತುವೆ ನನಗಲ್ಲ , ನನ್ನ ಮನೆಯವರಿಗಲ್ಲ ಸಾರ್ವಜನಿಕರಿಗಾಗಿ ಸೇತುವೆ ಉಳಿಸಿಕೊಳ್ಳಬೇಕು. ನೋಡಿ ಸೇತುವೆ ಬಿರುಕುಬಿಟ್ಟಿದೆ" ಹೀಗೆ ಆಕ್ರೋಶಗೊಂಡು ಕೆಲವರೊಂದಿದಿಗೆ ವಾಗ್ವಾದ ಮಾಡುತ್ತಿರುವ ಸ್ಥಳೀಯ ವ್ಯಕ್ತಿಯೊಬ್ಬರ ಹಳೆಯದಾದ ವೀಡಿಯೋ ಮುಲ್ಲರಪಟ್ನ ಸೇತುವೆ ಕುಸಿದು ಬಿದ್ದ ಬಳಿಕ ವೈರಲ್ ಆಗಿದೆ.
ದೃಶ್ಯಾವಳಿಯಲ್ಲಿ ಮುಂದುವರಿದ ಭಾಗವಾಗಿ , ಸ್ಥಳೀಯರಂತೆ ಕಾಣುವ ವ್ಯಕ್ತಿಯೊಬ್ಬರು ಸೇತುವೆ ಆ ಕಡೆ ಈ ಕಡೆ ಸಿಟ್ಟಿನಿಂದ ಓಡಾಡುತ್ತಾ ,'' ಮರಳು ತೆಗೆಯುತ್ತೀರಲ್ಲ ಸೇತುವೆ ಸ್ಥಿತಿ ಹೇಗಿದೆ ನೋಡಿ " ಎಂದಾಗ , ಇದಕ್ಕೆ "ಮರಳುಗಾರಿಕೆ ಕಾರಣ ಅಲ್ಲ" ಎನ್ನುವ ದ್ವನಿಯೂ ಕೇಳಿಸುತ್ತದೆ. ಆಗ ಮತ್ತಷ್ಟು ಸಿಡಿಮಿಡಿಗೊಂಡ ವ್ಯಕ್ತಿ, "ಸೇತುವೆ ಮೇಲ್ಬಾಗ ನೋಡಿ ಹೇಳಬೇಡಿ ಕೆಳಭಾಗ ನೋಡಿ ..ಮರಳುಗಾರಿಕೆಯಿಂದ ಅವರು ದುಡ್ದು ಮಾಡ್ತಾರೆ ಸೇತುವೆ ಹಾಳಾದರೆ ಯಾರಿಗೆ ನಷ್ಟ" ಎಂದು ಅಕ್ಷೇಪಿಸುತ್ತಾ ಬ್ಯಾರಿ ಭಾಷೆಯಲ್ಲಿರುವ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಕ್ರಮ ಮರಳುಗಾರಿಕೆಯೇ ಈ ಸೇತುವೆ ಮುರಿದು ಬೀಳಲು ಕಾರಣ ಎನ್ನುವ ಆರೋಪ ಸ್ಥಳೀಯರದ್ದು. ಬಂಟ್ವಾಳ ಹಾಗೂ ಮಂಗಳೂರು ಗಡಿ ಪ್ರದೇಶವಾದ ಮುಲಾರ್ ಪಟ್ನದ ವಿಚಾರದಲ್ಲಿ , ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೂ ಗೊಂದಲ ಇದ್ದದ್ದೇ. ಹೀಗಾಗಿ ಇಲ್ಲಿ ನಡೆಯುವ ಅಕ್ರಮ ಚಟುವಟಿಕೆಯನ್ನು ಯಾರು ತಡೆಯಬೇಕು ಎನ್ನುವ ಪ್ರಶ್ನೆಗಳ ನಡುವೆ, ಅಕ್ರಮ ಮರಳುಗಾರಿಕೆ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಆಗೋಮ್ಮೆ ಈಗೊಮ್ಮೆ ಬಂಟ್ವಾಳ ತಹಶೀಲ್ದಾರ್, ಗಣಿ ಇಲಾಖೆ, ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದವರನ್ನು ತಡೆದ ಉದಾಹರಣೆಗೂ ಇವೆ. ಹೀಗಿದ್ದರೂ ಕಳೆದ ಹದಿನೈದು ದಿನಗಳಿಂದ ಇಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಸೇತುವೆ ಬಲಿಯಾಗಿದೆ ಎನ್ನುವ ಆರೋಪ ಸ್ಥಳೀಯರದ್ದು.
ಏನಾಯ್ತು..
ಇಲ್ಲಿ ಮರಳುಗಾರಿಕೆ ನಡೆಸುವವರು, ಹಿಟಾಚಿಯಂತಹಾ ಬೃಹತ್ ಯಂತ್ರವನ್ನು ಬಳಸಿ ಸೇತುವೆ ಅಡಿಭಾಗದಿಂದ ಮರಳನ್ನು ಎತ್ತಿ ದೋಣಿಗಳಿಗೆ ತುಂಬಿಸಿ, ಆ ಬಳಿಕ ಲಾರಿಗಳ ಮೂಲಕ ಸಾಗಾಟ ನಡೆಸುತ್ತಿದ್ದರು. ಮೂರು ದಿನದ ಹಿಂದೆ ಈ ಯಂತ್ರ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಒಂದು ಪಿಲ್ಲರ್ ಗೆ ಡಿಕ್ಕಿಯಾಗಿದ್ದೇ, ಸೇತುವೆ ಮುರಿದು ಬೀಳಲು ಕಾರಣ ಎಂದು ಹೇಳಲಾಗಿದೆ. ಘಟನೆ ನಡೆದಾಗ ಪರಿಸರದಲ್ಲಿ ದೊಡ್ಡ ಶಬ್ದವಾಗಿದ್ದು, ಸ್ಥಳೀಯರೆಲ್ಲರೂ ಸೇತುವೆಯ ಬಳಿ ಜಮಾಯಿಸಿ, ಪರಿಶೀಲಿಸಿದ್ದರು. ಆದರೆ ಗಂಭೀರ ಹಾನಿ ಕಂಡು ಭಾರದ ಹಿನ್ನೆಲೆಯಲ್ಲಿ ಸುಮ್ಮನಾಗಿದ್ದರು.
ಸೋಮವಾರ ಬಿದ್ದೇ ಬಿಟ್ಟಿತು..
ಎರಡು ದಿನಗಳ ಹಿಂದೆ ಹಾನಿಗೀಡಾದ ಸೇತುವೆ, ಫಲ್ಗುಣಿ ನದಿಯಲ್ಲಿ ನೀರಿನ ಹರಿವಿನ ತೀವ್ರತೆಗೆ ನೆಲದಿಂದ ಬೇರ್ಪಟ್ಟಿದ್ದ ಪಿಲ್ಲರ್ ನೀರ ರಭಸಕ್ಕೆ ನೀರುಪಾಲಾಗಿದ್ದು, ಸೇತುವೆ ಬಿದ್ದು ಬಿಟ್ಟಿದೆ. ಸುಮಾರು 50 ವರ್ಷಗಳಷ್ಟು ಹಳೆಯದಾದ ಈ ಸೇತುವೆಯ 177 ಮೀಟರ್ ಉದ್ದವಿದ್ದು, 7.50 ಮೀಟರ್ ಅಗಲವಿದೆ. 20 ಮೀಟರ್ ಅಂತರದಲ್ಲಿ 8 ಪಿಲ್ಲರ್ ಗಳನ್ನು ನಿರ್ಮಿಸಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಇದೀಗ ಸೇತುವೆ ಮುರಿದು ಬಿದ್ದ ಹಿನ್ನೆಲೆಯಲ್ಲಿ ಕುಪ್ಪೆಪದವು- ಬಂಟ್ವಾಳ ಸಂಪರ್ಕ ಕಡಿತಗೊಂಡಿದೆ.