ಕುಂದಾಪುರ, ಜೂ 25: ಸಂಪ್ರಾದಾಯಿಕ ಬೇಸಾಯಕ್ಕೆ ಆಧಾರ ಸ್ತಂಭವಾಗಿದ್ದ ಎತ್ತು, ಕೋಣಗಳು ಈಗ ಗದ್ದೆಯಿಂದ ಬಹುದೂರವಾಗಿ ಬಿಟ್ಟಿವೆ. ಯಾಂತ್ರೀಕೃತ ಬೇಸಾಯ ಪದ್ದತಿಯಿಂದ ಎತ್ತು, ಕೋಣಗಳಿಗೆ ಕರಾವಳಿ ಜಿಲ್ಲೆಯಲ್ಲಿ ಸಂಪೂರ್ಣ ವಿಶ್ರಾಂತಿ. ಗದ್ದೆ ಉಳುಮೆ ಮಾಡಲು ಕೋಣ, ಎತ್ತುಗಳನ್ನೇ ಆಶ್ರಯಿಸಿದ್ದ ರೈತರು ಈಗ ಸುಲಭ ವಿಧಾನಗಳತ್ತ ಮನಸ್ಸು ಮಾಡಿದ್ದಾರೆ. ಅದರಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಎತ್ತು, ಕೋಣ ಸಾಕುವುದೇ ನಿಂತು ಹೋಗಿದೆ. ಈಗ ಏನಿದ್ದರೂ ಟಿಲ್ಲರ್, ಟ್ಯಾಕ್ಟರ್ಗಳದ್ದೆ ಸದ್ದು. ಬೆಳಿಗ್ಗೆಯಿಂದ ಸಂಜೆ ತನಕ ಭಾರದ ನೊಗ ಎಳೆಯುತ್ತಿದ್ದ ಕೋಣಗಳು ರೈತರಿಗೆ ಎಂದು ಬೇಡವಾದವೊ ಅದರ ಜೊತೆ ಉಳುಮೆ ಮಾಡುವವರು ಕೂಡಾ ಮೂಲೆಗುಂಪಾದರು.
ಕಳೆದ ಒಂದು ದಶಕದಿಂದ ಯಾಂತ್ರೀಕೃತ ಕೃಷಿ ಪದ್ದತಿ ಸಾಕಷ್ಟು ಜನಪ್ರಿಯವಾಗುತ್ತಿದ್ದು ಎಲ್ಲ ರೈತರು ಕೂಡಾ ಯಾಂತ್ರೀಕೃತ ಕೃಷಿ ಪದ್ದತಿಯನ್ನೇ ನೆಚ್ಚಿಕೊಂಡಿದ್ದಾರೆ. ಈಗೀಗಂತೂ ಹಳ್ಳಿಹಳ್ಳಿಯಲ್ಲೂ ಕೂಡಾ ಹುಡುಕಿದರೆ ಒಂದೇ ಒಂದು ಜೊತೆ ಕೋಣ, ಎತ್ತುಗಳು ಕಾಣಸಿಗುವುದು ಕಷ್ಟ. ಕಳೆದ ಕೆಲವು ವರ್ಷಗಳ ಕಂಬಳ ನಿಷೇಧದಿಂದಾಗಿ ಕಂಬಳಕ್ಕಾಗಿ ಕೋಣ ಸಾಕುವುದನ್ನು ಬಿಟ್ಟಿದ್ದಾರೆ. ಈಗ ಹಟ್ಟಿಕೊಟ್ಟಿಗೆಗಳು ಖಾಲಿ ಖಾಲಿ.
ಉಳುಮೆಗೆ ಎತ್ತು ಕೋಣಗಳನ್ನು ಸಾಕುವುದರಿಂದ ಯಥೇಚ್ಛ ಗೊಬ್ಬರವೂ ಕೂಡಾ ಲಭಿಸುತ್ತಿತ್ತು. ಪ್ರತಿ ರೈತರ ಮನೆಯ ಕೊಟ್ಟಿಗೆಯಲ್ಲಿ ಎಂದೆರಡು ಜೊತೆ ಕೋಣಗಳು ಇರುತ್ತಿದ್ದವು. ಕೃಷಿ ಆದಾರಿತ ಕುಟುಂಬಗಳು ಪಶುಸಂಗೋಪನೆಯಲ್ಲಿಯೂ ಗುರುತಿಸಿಕೊಂಡಿದ್ದವು. ಸಾಕು ಪ್ರಾಣಿಗಳು ಎಂದರೆ ಆಗ ಎತ್ತು, ಕೋಣಗಳೆ ಪ್ರಮುಖವಾಗಿದ್ದವು. ಮನೆಯಲ್ಲಿ ಒಂದಿಬ್ಬರು ಕೋಣಗಳ ಆರೈಕೆಗೆ ಇರುತ್ತಿದ್ದರು. ಮಳೆಗಾಲ ಆರಂಭವಾಯಿತೆಂದರೆ ಹಾಡಿ-ಹಕ್ಲುಗಳಲ್ಲಿ ಸೊಪ್ಪು ತರುವುದು, ಬೇಸಗೆ ಕಾಳದಲ್ಲಿ ಮರದಿಂದ ಉದುರಿದ ತರಗಲೆಗಳನ್ನು ತಂದು ಕೊಟ್ಟಿಗೆಗೆ ಹಾಕಿ ಫಲವತ್ತಾದ ಗೊಬ್ಬರ ಪಡೆಯುತ್ತಿದ್ದರು. ಹಟ್ಟಿ ತುಂಬಾ ಜಾನುವಾರುಗಳು ಅವುಗಳಿಗೆ ಹರಿಯಣ್ಣನ ಸ್ಥಾನದಲ್ಲಿ ಕೊಟ್ಟಿಗೆಯ ಯಜಮಾನನಂತೆ ಕೋಣಗಳು ಇರುತ್ತಿದ್ದವು.
ಆದರೆ ಈಗ ಆದೊಂದು ಕಾಲ ಇತ್ತು ಎಂದು ನೆನಪು ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇವತ್ತಿನ ಇವತ್ತಿನ ಮಕ್ಕಳಿಗೆ ಎತ್ತು ಕೋಣಗಳ ಉಳುಮೆಯೇ ಗೊತ್ತಿಲ್ಲ. ಪಠ್ಯ ಪುಸ್ತಕಗಳಲ್ಲಿ ಉಳುಮೆಯ ಬಗ್ಗೆ ಪಾಠವಿದ್ದರೆ ಅದನ್ನು ಶಿಕ್ಷಕರು ವಿದ್ಯಾರ್ಥಿಗಳ ಮನವರಿಕೆ ಮಾಡಲು ಹರಸಾಹಸ ಪಡಬೇಕಾದ ಸ್ಥಿತಿ ಬಂದಿದೆ. ಒಂದು ಶ್ರಮ ಸಂಸ್ಕೃತಿಯೇ ಈಗ ದೂರಾಗಿದೆ.
ಉಪ್ಪಿನಕುದ್ರುವಿನಲ್ಲಿ ಅಪರೂಪದ ಕೋಣಗಳ ಉಳುಮೆ
ಇವತ್ತು ಹುಡುಕಿದರೂ ಪ್ರತಿ ಗ್ರಾಮದಲ್ಲಿ ಕನಿಷ್ಠ ಒಂದು ಜೊತೆ ಕೋಣ, ಎತ್ತುಗಳನ್ನು ಕಂಡು ಹಿಡಿಯುವುದು ಕಷ್ಟ. ಅಂತಹದರಲ್ಲಿ ತಲ್ಲೂರು ಗ್ರಾಮ ಪಂಚಾಯತ್ನ ಉಪ್ಪಿನಕುದ್ರು ಎಂಬಲ್ಲಿ ಒಂದು ಜೊತೆ ಕೋಣಗಳು ಉಳುಮೆಯಲ್ಲಿ ನಿರತವಾಗಿರುವ ದೃಶ್ಯ ಕಂಡು ಬರುತ್ತಿದೆ. ದಿನೇಶ ಅವರ ಬಳಿ ಇನ್ನೂ ಒಂದು ಜೊತೆ ಕೋಣ ಇದ್ದು, ಅವರು ಈಗಲೂ ಕೋಣಗಳಿಂದಲೇ ಉಳುಮೆ ಮಾಡುತ್ತಿರುವುದು ವಿಶೇಷ. ಶನಿವಾರ ಇಳಿ ಸಂಜೆಯ ಹೊತ್ತಲ್ಲಿ ಶೀನ ಅವರು ಉಳುಮೆ ಮಾಡುತ್ತಿರುವ ದೃಶ್ಯ ಹತ್ತಾರು ವರ್ಷಗಳ ಹಿಂದಿನ ಗತ ವೈಭವಕ್ಕೆ ಕರೆದೊಯ್ಯುತ್ತಿವೆ.