Karavali
ಅಪಪ್ರಚಾರದ ಮೂಲಕ ಸುಬ್ರಹ್ಮಣ್ಯ ಮಠದ ಹೆಸರನ್ನು ತೇಜೊವಧೆ ಮಾಡಬೇಡಿ - ವಿದ್ಯಾಪ್ರಸನ್ನ ಸ್ವಾಮೀಜಿ
- Mon, Jun 25 2018 03:01:19 PM
-
ಮಂಗಳೂರು, ಜೂ25: ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿ ಧಾರ್ಮಿಕ ಕಾರ್ಯಕ್ರಮವನ್ನು ನಡೆಸುವಲ್ಲಿ ನೂರಾರು ವರುಷಗಳ ಇತಿಹಾಸವಿರುವ ಕುಕ್ಕೆ-ಸುಬ್ರಹ್ಮಣ್ಯ ಮಠ ಯಾವುದೇ ರೀತಿಯ ಅವ್ಯವಹಾರ ನಡೆಸಿಲ್ಲ ಎಂದು ಜಗದ್ಗುರು ಮಧ್ವಾಚಾರ್ಯ ಮಹಾ ಸಂಸ್ಥಾನದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ದಾಯ್ಜಿವರ್ಲ್ಡ್ ವಾಹಿನಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ನೂರಾರು ವರುಷಗಳ ಇತಿಹಾಸವಿರುವ ಕುಕ್ಕೆ ಸುಬ್ರಹ್ಮಣ್ಯ ಮಠ ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿ ಧಾರ್ಮಿಕ ಕಾರ್ಯಕ್ರಮವನ್ನು ನಡೆಸುವಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆಸಿಲ್ಲ. ಹಿಂದಿನ ಕಾಲದಿಂದಲೂ ಮಠದಲ್ಲಿನ ಸೇವಾ ಸಂಪ್ರದಾಯದಂತೆ ಈ ಸೇವೆಯನ್ನು ಕರ್ತೃಗಳ ನಿಯೋಜನೆಯಡಿಯಲ್ಲಿ ಮಾಡಲಾಗುತ್ತಿದೆ. ಆದರೆ, ಮಠದಲ್ಲಿ ವಿಧಿ-ವಿಧಾನದಂತೆ ನಡೆಯುವ ಈ ಧಾರ್ಮಿಕ ಕಾರ್ಯಕ್ರಮದ ಕುರಿತು ಅಪಪ್ರಚಾರ ನಡೆಸಲಾಗಿದೆ. ವೈಯಕ್ತಿಕ ಹಿತಾಸಕ್ತಿಯನ್ನು ಇಟ್ಟುಕೊಂಡು ಕೆಲವರು ಮಠದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಮಾತ್ರವಲ್ಲ, ಸುಬ್ರಹ್ಮಣ್ಯ ಮಠದ ಹೆಸರು ಹಾಳು ಮಾಡುವ ಪ್ರಯತ್ನ ನಡೆಸಿದ್ದಾರೆ. ನೂರಾರು ವರುಷಗಳ ಹಿಂದಿನಿಂದ ನಡೆದುಕೊಂಡು ಬಂದಿರುವ ಧಾರ್ಮಿಕ ಆಚರಣೆಗಳಿಗೆ ಅಪಪ್ರಚಾರ ಮಾಡುವ ಮೂಲಕ ಮಠದ ಹೆಸರನ್ನು ತೇಜೊವಧೆ ಮಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಸುಬ್ರಹ್ಮಣ್ಯ ಮಠದಲ್ಲಿ ಭಕ್ತರ ಇಚ್ಛೆಯಂತೆಯೇ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ನೆರವೇರುತ್ತಿದ್ದು, ಸರ್ಪ ದೋಷ ಮುಕ್ತಿಗಾಗಿ ಈ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಮಠದಲ್ಲಿ ನಡೆಸುವ ಎಲ್ಲಾ ಸೇವೆಗಳಿಗೂ ನಾವು ರಶೀದಿ ಕೊಡುತ್ತೇವೆ. ಇಲ್ಲಿ ಯಾವುದೇ ದಲ್ಲಾಳಿಗಳಿಲ್ಲ. ಅಧಿಕ ಶುಲ್ಕ ವಿಧಿಸಿ ಲಾಭ ಮಾಡಿಕೊಳ್ಳುವ ಯಾವ ದುರಾಲೋಚನೆಯೂ ಸುಬ್ರಹ್ಮಣ್ಯ ಮಠಕ್ಕಿಲ್ಲ. ಮಠಕ್ಕೆ ಬರುವ ಆದಾಯವನ್ನು ಸಮಾಜದ ಕಲ್ಯಾಣಕ್ಕಾಗಿ ವ್ಯಯಿಸುತ್ತಿದ್ದೇವೆಯೇ ಹೊರತು ವೈಯಕ್ತಿಕ ಭೋಗಕ್ಕಾಗಿ ಇಲ್ಲಿಯವರೆಗೂ ವಿನಿಯೋಗಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುಬ್ರಹ್ಮಣ್ಯ ಮಠದ ವಿರುದ್ಧ ನಡೆಸುವ ಇಲ್ಲಸಲ್ಲದ ಆರೋಪಗಳು ಇಲ್ಲಿಗೆ ನಂಬಿಕೆಯಿಟ್ಟು ಆಗಮಿಸುವ ಭಕ್ತ ಸಮೂಹದ ಮೇಲೆ ಪರಿಣಾಮ ಬೀರುತ್ತವೆ. ಸುಳ್ಳು ಆರೋಪ ಮಾಡಿ ಮುಗ್ಧ ಭಕ್ತರ ಮನಸ್ಸಿನಲ್ಲಿ ಗೊಂದಲ ಹುಟ್ಟಿಸುವ ಕೆಲಸ ಸರಿ ಅಲ್ಲ. ಭಕ್ತರ ಮನಸ್ಸಿಗೆ ನೋವು ಉಂಟುಮಾಡುವ ಕೆಲಸ ಮಾಡಬೇಡಿ. ಆಡಳಿತ ಮತ್ತು ಧಾರ್ಮಿಕ ಕಾರ್ಯಗಳಿಗೆ ಸಂಬಂಧ ಕಲ್ಪಿಸಿ, ಮಠದ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸುಳ್ಳು ಆರೋಪ ಮಾಡುವ ಮೂಲಕ ಧಾರ್ಮಿಕ ಹಕ್ಕನ್ನು ಹತ್ತಿಕ್ಕುವ ಕೆಲಸ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಬೇರೆ ಬೇರೆ ಸ್ಥಳಗಳಿಂದ, ದೂರದೂರುಗಳಿಂದ ಭಕ್ತರು ಅವರ ಕಷ್ಟಗಳನ್ನು ಹೇಳಿಕೊಂಡು ಸುಬ್ರಹ್ಮಣ್ಯ ಮಠಕ್ಕೆ ಬರುತ್ತಾರೆ. ನಾವು ಯಾವೊಬ್ಬ ಭಕ್ತರನ್ನು ಒತ್ತಾಯದಿಂದ ಮಠಕ್ಕೆ ಕರೆದುಕೊಂಡಿಲ್ಲ. ಅವರ ಇಷ್ಟದಂತೆ ಮಠಕ್ಕೆ ಆಗಮಿಸಿ ಪೂಜೆಯನ್ನು ಮಾಡಿಸಿಕೊಂಡು ಹೋಗುತ್ತಾರೆ. ಮಠಕ್ಕೆ ಬಂದು ಮಾತ್ರ ಪೂಜೆಯನ್ನು ಮಾಡಬೇಕು, ದೇವಾಲಯದಲ್ಲಿ ಆಶ್ಲೇಷ ಬಲಿ, ಸರ್ಪ ಸಂಸ್ಕಾರದ ರಶೀದಿಯನ್ನು ಮಾಡಬಾರದು ಎಂದು ಎಲ್ಲಿಯಾದರೂ ಹೇಳಿದ್ದರೆ ತಪ್ಪು ಎಂದು ಒಪ್ಪಿಕೊಳ್ಳುತ್ತೇವೆ. ಅದು ಬಿಟ್ಟು, ವೈಯಕ್ತಿಕ ಹಿತಾಸಕ್ತಿಯನ್ನು ಇಟ್ಟುಕೊಂಡು ಮಠದ ವಿರುದ್ಧ ಮಾತನಾಡಿ, ನೂರಾರು ವರುಷಗಳಿಂದ ಕಾಪಾಡಿಕೊಂಡು ಬಂದ ಮಠದ ಹೆಸರು ಹಾಳು ಮಾಡುವುದು ಸರಿಯಲ್ಲ ಎಂದು ವಿನಂತಿಸಿಕೊಂಡಿದ್ದಾರೆ.
ನಾನು ಕೇವಲ ಎರಡು ತುಂಡು ಬಟ್ಟೆ ಹಾಕುವ ಸಾಮಾನ್ಯ ಸ್ವಾಮೀಜಿ. ಯಾವುದೇ ಕೀರ್ತಿ, ಲಾಭದ ಆಸೆ ನನಗಿಲ್ಲ. ಮುಜರಾಯಿ ಇಲಾಖೆಯಿಂದ ಕಡಿಮೆ ಖರ್ಚು ಆಗುವುದಾದರೆ ಭಕ್ತರು ಅಲ್ಲಿಯೇ ಸೇವೆಗಳನ್ನು ಮಾಡಲಿ. ಯಾವುದೇ ಪೂಜೆ ಮಾಡುವಾಗ ಭಕ್ತರು ಮನಸ್ಸಿದ್ದು ಸೇವೆಯನ್ನು ಮಾಡಬೇಕು. ನಮ್ಮ ಮಠದಲ್ಲಿಯೇ ಬಂದು ಪೂಜೆಯನ್ನು ಮಾಡಬೇಕು ಎಂದು ಯಾರನ್ನೂ ನಾವು ಒತ್ತಾಯಪೂರ್ವಕವಾಗಿ ಕರೆದಿಲ್ಲ. ಆದರೆ ಮುಜರಾಯಿ ಇಲಾಖೆ, ಪ್ರತ್ಯೇಕವಾಗಿ ಪೂಜೆ ಮಾಡಿದರೆ ಯಾವುದೇ ಫಲವಿಲ್ಲ. ಸಾಮೂಹಿಕವಾಗಿ ಪೂಜೆ ಮಾಡಿದರೆ ಮಾತ್ರ ಫಲ ಎಂದು ಮಠದ ಬಗ್ಗೆ ಆರೋಪ ಮಾಡಿದೆ. ಈ ರೀತಿ ಇಲ್ಲಸಲ್ಲದ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ನೂರಾರು ವರುಷಗಳ ಇತಿಹಾಸವಿರುವ ಈ ಮಠಕ್ಕೆ ನಾವು "ಸುಬ್ರಹ್ಮಣ್ಯ ಮಠ" ಎಂದು ಹೆಸರಿಟ್ಟಿದ್ದಲ್ಲ. ಸುಬ್ರಹ್ಮಣ್ಯ ಮಠ ಎಂದು ಈ ಹಿಂದೆ ಮಠದಲ್ಲಿದ್ದ ಹಿರಿಯರು ಇಟ್ಟ ಹೆಸರು. ಆದರೆ ಕೆಲವರು ಮಠದ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಜನರಿಗೆ, ಭಕ್ತರಿಗೆ ಮೋಸ ಮಾಡುವ ಉದ್ದೇಶದಿಂದ ಮಠಕ್ಕೆ "ಸುಬ್ರಹ್ಮಣ್ಯ ಮಠ" ಎಂದು ಹೆಸರಿಟ್ಟಿರುವುದು ಅಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ.
ನನಗೆ ಮಠದ ಮುಖಂಡನಾಗಿ ಕೆಲವೊಂದು ಜವಾಬ್ದಾರಿಗಳಿದೆ. ಭಕ್ತರು ಕಷ್ಟ ಎಂದು ಹೇಳಿಕೊಂಡು ಬಂದಾಗ ಅದನ್ನು ನಾನು ನಿವಾರಿಸುವ ಪ್ರಯತ್ನ ಮಾಡಿದ್ದೇನೆ. ನಮ್ಮಲ್ಲಿ ಮುಕ್ತವಾಗಿ ಮಾತನಾಡಲು ಎಲ್ಲರಿಗೂ ಅವಕಾಶವಿದೆ. ನನಗೆ ನಿರ್ದಿಷ್ಟ ಸಂಪತ್ತನ್ನು ಮಾಡಿಕೊಂಡು ಬದುಕುವ ಯಾವುದೇ ಆಸೆ ಇಲ್ಲ. ನಮ್ಮ ಮತ್ತು ಭಕ್ತರ ನಡುವೆ ಯಾವುದೇ ಗೊಂದಲವಿಲ್ಲ. ಆದರೆ ಮೂರನೇ ವ್ಯಕ್ಯಿಗಳಿಂದ ಮಠದ ವಿರುದ್ಧ ಅಪಪ್ರಚಾರ ನಡೆಸುವ ಕೆಲಸ ಆಗುತ್ತಿದೆ. ಈ ಮೂಲಕ ಭಕ್ತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಲು ನಾವು ಬಹಳಷ್ಟು ಕಷ್ಟ ಪಡುತ್ತೇವೆ. ಆದರೆ ವೈಯಕ್ತಿಕ ಹಿತಾಸಕ್ತಿಯಿಂದ ಕೆಲವರು ಸಂಸ್ಥೆಯ ಹೆಸರು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿಯ ಕೆಲಸ ಮಾಡಬೇಡಿ. ಸುಬ್ರಹ್ಮಣ್ಯ ಮಠದ ವಿಚಾರವಾಗಿ ರಾಜಕೀಯ ನಡೆಸಿ ಮಠಕ್ಕೆ ಕಳಂಕ ತರುವುದರಲ್ಲಿ ಯಾವುದೇ ಅರ್ಥವಿಲ್ಲ. ಧಾರ್ಮಿಕ ಕ್ಷೇತ್ರ ಮತ್ತು ಮಠಗಳಿಗೆ ಬೇಲಿ ಹಾಕುವ ಕೆಲಸಗಳನ್ನು ನಿಲ್ಲಿಸಿ ಎಂದು ತಿಳಿಸಿದ್ದಾರೆ.
ಇದೇ ವೇಳೆ ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ನಿಲುವು ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ವಲಯದಲ್ಲಿ ನನಗೆ ಯಾವುದೇ ಆಸಕ್ತಿಯಿಲ್ಲ. ರಾಜಕೀಯದಲ್ಲಿ ಒಳ್ಳೆಯವರಿಗೆ ಒಳ್ಳೆಯ ಹೆಸರು ಬರುವುದಕ್ಕಿಂತಲೂ ಕೆಟ್ಟ ಹೆಸರು ಬರುವುದೇ ಹೆಚ್ಚು. ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದರೆ ಎಲ್ಲಾ ವಿಚಾರದಲ್ಲೂ ಪ್ರಮಾಣಿಕತೆಯನ್ನು ಪಾಲಿಸುವುದು ಕಷ್ಟ. ಹೀಗಾಗಿ ರಾಜಕೀಯದತ್ತ ನನ್ನ ನಡೆ ಇಲ್ಲ ಎಂದು ಹೇಳಿದ್ದಾರೆ.