ಮಂಗಳೂರು, ಜೂ25: ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಸೀಸನ್ 2 ರಿಯಾಲಿಟಿ ಶೋನಲ್ಲಿ ಮಂಗಳೂರಿನ ಪ್ರತಿಭೆ ಸೂರಜ್ ತಮ್ಮ ಅದ್ಭುತ ಹಾಸ್ಯ ನಟನೆಯ ಮೂಲಕ ಎರಡನೇ ಸ್ಥಾನ ಪಡೆದುಕೊಂಡು ತುಳುನಾಡಿಗೆ ಹೆಮ್ಮೆ ತರುವ ಸಾಧನೆ ಮಾಡಿದ್ದಾರೆ.
ಕಿರುತೆರೆ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯದ 30 ಜಿಲ್ಲೆಗಳಿಗೂ ಹೋಗಿ ಕಿಲಾಡಿಗಳಿಗಾಗಿ ಆಡಿಷನ್ ನಡೆಸಿ, 25 ಸಾವಿರಕ್ಕೂ ಮಿಕ್ಕಿ ಕಲಾವಿದರಲ್ಲಿ 15 ಜನರನ್ನು ಕಾಮಿಡಿ ಕಿಲಾಡಿಗಳು - 2 ಆಯ್ಕೆ ಮಾಡಿಕೊಂಡಿತ್ತು. ಒಟ್ಟು 15 ಸ್ಪರ್ಧಿಗಳಲ್ಲಿ ಮಂಗಳೂರಿನ ಪ್ರತಿಭಾವಂತ ಕಲಾವಿದರಾದ ಸೂರಜ್ ಮತ್ತು ಧೀರಜ್ ನೀರುಮಾರ್ಗ ಆಯ್ಕೆಯಾಗಿದ್ದರು. ಈ ಇಬ್ಬರು ಕಾಮಿಡಿ ಕಿಲಾಡಿಗಳು ಸೀಸನ್ 2 ರಿಯಾಲಿಟಿ ಶೋನಲ್ಲಿ ಬೇರೆ ಬೇರೆ ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರಿಗೆ ನಗೆಯ ರಸದೌತಣವನ್ನು ನೀಡಿದ್ದರು.
ಇದೀಗ ಕಾಮಿಡಿ ಕಿಲಾಡಿಗಳು ಸೀಸನ್- 2 ಶೋನ ಕೊನೆಯ ಸುತ್ತು ಮುಗಿದಿದ್ದು, ಒಟ್ಟು 10 ಅಂತಿಮ ಸ್ಪರ್ಧಿಗಳಲ್ಲಿ ಮಂಗಳೂರಿನ ಪ್ರತಿಭೆ ಸೂರಜ್ ದ್ವೀತಿಯ ಸ್ಥಾನ ಪಡೆಯುವ ಮೂಲಕ ಕರಾವಳಿಯ ಕಂಪನ್ನು ಎಲ್ಲೆಡೆ ಪಸರಿಸಿದ್ದಾರೆ. ಮಂಗಳೂರು ಸಮೀಪದ ಕಾವೂರಿನ ಸುನೀಲ್ ಕುಮಾರ್ ಮತ್ತು ರೇಖಾ ಸುವರ್ಣ ದಂಪತಿಯ ಪುತ್ರನಾದ ಸೂರಜ್ ಅವರಿಗೆ ಎಳೆಯ ವಯಸ್ಸಿನಿಂದಲೇ ರಂಗಭೂಮಿಯ ಬಗೆಗೆ ಆಳವಾದ ಜ್ಞಾನವಿತ್ತು. ಮಾತ್ರವಲ್ಲ 19ನೇ ವಯಸ್ಸಿನಲ್ಲಿಯೇ ಸೂರಜ್ ಕಲಾ ಭಾರ್ಗವ ಎಂಬ ಬಿರುದನ್ನು ಪಡೆದುಕೊಂಡ ಅಪ್ರತಿಮ ಕಲಾವಿದರಾಗಿದ್ದಾರೆ.
ದಾಯ್ಜಿವರ್ಲ್ಡ್ ವಾಹಿನಿ ಜೊತೆ ಮಾತನಾಡಿದ ಸೂರಜ್, ವೇದಿಕೆಯ ಗೆಲುವಿಗಿಂತ ಆಂತರಿಕ ಗೆಲುವು ಮುಖ್ಯ. ಆರು ತಿಂಗಳ ಅವಧಿಯಲ್ಲಿ ಜೀ ಕನ್ನಡ ವಾಹಿನಿಯ ಅಂಗಳದಲ್ಲಿ ಸಾಕಷ್ಟು ಕಲಿತಿದ್ದೀನಿ. ಇದಕ್ಕಿಂತ ಹೆಚ್ಚಿನ ಗೆಲುವು ಏನಿಲ್ಲ. ನನ್ನ ಗೆಲುವಿಗೆ ತಂದೆ ತಾಯಿಯ ಜೊತಗೆ ಅಭಿಮಾನಿಗಳ ಪ್ರೀತಿ, ಆಶೀರ್ವಾದ, ಪ್ರೋತ್ಸಾಹವೇ ಕಾರಣ. ಎಲ್ಲರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ, ಪ್ರೀತಿ ಮುಂದೆಯೂ ಇರಲಿ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.